ಲೋಕಸಭಾ ಚುನಾವಣೆ ಹಿನ್ನಲೆ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ನವದೆಹಲಿ, ಜ.11- ಲೋಕಸಭಾ ಚುನಾವಣಾ ಸಮರಕ್ಕಾಗಿ ಬಿಜೆಪಿ ಸಜ್ಜಾಗುತ್ತಿದ್ದು, ನವದೆಹಲಿಯಲ್ಲಿ ಇಂದಿನಿಂದ ಆರಂಭವಾಗಿರುವ ಎರಡು ದಿನಗಳ ಮಹತ್ವದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚುನಾವಣಾ ರಣತಂತ್ರಗಳ ಬಗ್ಗೆ ಮಹತ್ವದ ಚರ್ಚೆ ನಡೆದಿದ್ದು, ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.

ಇಲ್ಲಿನ ರಾಮಲೀಲಾ ಮೈದಾನದಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಿದರು.
ದೇಶದ ವಿವಿಧ ರಾಜ್ಯಗಳಿಂದ 12ಸಾವಿರಕ್ಕೂ ಹೆಚ್ಚು ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿದ್ದು, ಚುನಾವಣಾ ರಣೋತ್ಸಾಹಕ್ಕೆ ಸಾಕ್ಷಿಯಾಗಿದೆ.

ಮುಂದಿನ ತಿಂಗಳ ಕೊನೆಯ ವಾರದಲ್ಲಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.

ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಸಮಾಜದ ವಿವಿಧ ವರ್ಗಗಳನ್ನು ತಲುಪುವ ನಿಟ್ಟಿನಲ್ಲಿ ವಿವಿಧ ಕಾರ್ಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಇದು ಈ ಎರಡು ದಿನಗಳ ಸಭೆಯಲ್ಲಿ ಸ್ಪಷ್ಟ ರೂಪ ಪಡೆಯಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಮೇಲ್ಜಾತಿಗೆ ಪ್ರಧಾನಿ ನರೇಂದ್ರ ಮೋದಿ ಶೇ.10ರಷ್ಟು ಮೀಸಲಾತಿ ಘೋಷಿಸಿ ಸಾಮಾಜಿಕ ನ್ಯಾಯದ ಕಾರ್ಯತಂತ್ರ ಅನುಸರಿಸಿರುವ ಹಿನ್ನೆಲೆಯಲ್ಲಿ ಈ ಸಭೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಮತ್ತು ಈಗಾಗಲೇ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ವಿವಿಧ ಜನಪರ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿಗೆ ತೆರಳಿ ಪರಿಣಾಮಕಾರಿಯಾಗಿ ಕೇಂದ್ರದ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಸಂಬಂಧ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ.

ಚುನಾವಣಾ ಪೂರ್ವ ಸಿದ್ಧತೆ-ಕಾರ್ಯತಂತ್ರ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಸೇರಿದಂತೆ ಕೇಂದ್ರ ಅನುಷ್ಠಾನಗೊಳಿಸಿರುವ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳು ಮತ್ತು ಪ್ರಚಲಿತ ರಾಜಕೀಯ ವಿದ್ಯಮಾನಗಳು ಪ್ರಮುಖವಾಗಿ ಈ ಸಭೆಯಲ್ಲಿ ಗಹನ ಚರ್ಚೆಗೆ ಒಳಪಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ನಾಳೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಲಿದ್ದಾರೆ.

ಬಿಹಾರದಲ್ಲಿ ಮಾಜಿ ಸಚಿವ ಉಪೇಂದ್ರ ಖುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‍ಎಲ್‍ಎಸ್‍ಪಿ) ಎನ್‍ಡಿಎ ತೊರೆದಿರುವ ಹಿನ್ನೆಲೆಯಲ್ಲಿ ಮತ್ತು ಕೆಲವೆಡೆ ಬಿಜೆಪಿ ವಿರೋಧಿ ಅಲೆಗಳು ಎದ್ದಿರುವ ಕಾರಣ ದೇಶಾದ್ಯಂತ ಎನ್‍ಡಿಎಯನ್ನು ಮತ್ತಷ್ಟು ಬಲವರ್ಧನೆ ಗೊಳಿಸುವ ನಿಟ್ಟಿನಲ್ಲಿಯೂ ಚರ್ಚೆಗಳು ನಡೆದಿವೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಆಡಳಿತಾರೂಢ ಪಕ್ಷಕ್ಕೆ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ವಿಧೇಯಕ ಸಂಸತ್‍ನಲ್ಲಿ ಅನುಮೋದನೆಗೊಂಡಿರುವುದು, ಮುಂದಿನ ಚುನಾವಣೆಯಲ್ಲಿ ಧನಾತ್ಮಕವಾಗಿ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಖ್ಯವಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೋಕಸಭಾ ಸ್ಥಾನ ಗೆದ್ದುಕೊಳ್ಳಲು ಅನುಕೂಲವಾಗಲಿದೆ. ಇತರ ಹಿಂದುಳಿದ ವರ್ಗಗಳ ಆಯೋಗ (ಒಬಿಸಿ)ಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ್ದು, ದಲಿತರು ಮತ್ತು ಬುಡಕಟ್ಟು ವರ್ಗಗಳ ಜನರ ಮೇಲಿನ ದೌರ್ಜನ್ಯ ಕಾಯ್ದೆಯನ್ನು ಬಲವರ್ಧನೆ ಮಾಡಿದ್ದು, ರೈತರ ಕಲ್ಯಾಣಕ್ಕಾಗಿ ಕೈಗೊಂಡಿರುವ ಹಲವು ಕಾರ್ಯಕ್ರಮಗಳ ಬಗ್ಗೆ ಚರ್ಚಿಯಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

2014ರ ಚುನಾವಣೆಯಲ್ಲಿ ಬಿಜೆಪಿ 283 ಸ್ಥಾನಗಳನ್ನು ಗೆದ್ದು ಇತ್ತೀಚಿನ ವರ್ಷಗಳಲ್ಲಿ ಬಹುಮತ ಸಾಧಿಸಿದ ಒಂದೇ ಪಕ್ಷ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಅದನ್ನು ಉಳಿಸಿಕೊಂಡು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪಕ್ಷದ ಅಧ್ಯಕ್ಷ ಅಮಿತ್‍ಶಾ ಚುನಾವಣಾ ತಂತ್ರ ರೂಪಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ಬಿಗಿ ಪಟ್ಟು ಹಿಡಿದಿರುವ ಹಿಂದುತ್ವ ಸಂಘಟನೆಗಳ ಒತ್ತಡ, ರಫೇಲ್ ಯುದ್ಧ ವಿಮಾನ ಒಪ್ಪಂದ ವಿಷಯದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ವಾಗ್ದಾಳಿಗೆ ಪರಿಣಾಮಕಾರಿ ಪ್ರತಿಕ್ರಮಗಳು ಸೇರಿದಂತೆ ಕೆಲವು ಪ್ರಚಲಿತ ರಾಜಕೀಯ ವಿದ್ಯಮಾನ್ಯಗಳು ಕೂಡ ಸಭೆಯಲ್ಲಿ ಚರ್ಚೆಯಾಗಿವೆ.

ರಾಮಲೀಲಾ ಮೈದಾನದಲ್ಲಿ ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಪ್ರಧಾನ ಮಂತ್ರಿಗಳ ಕಚೇರಿ ನಿರ್ಮಿಸಲಾಗಿದೆ. ಅಲ್ಲಿಂದಲೇ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಸಂಬಂಧಿಸಿದ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.

ಸೌತ್‍ಬ್ಲಾಕ್‍ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಯಾವ ರೀತಿಯಲ್ಲಿ ವ್ಯವಸ್ಥೆ ಇರಲಿದೆಯೋ ಅದನ್ನೇ ಯಥಾವತ್‍ಅಳವಡಿಸಿಕೊಳ್ಳಲಾಗುತ್ತದೆ.ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗಾಗಿ ಪ್ರತ್ಯೇಕ ಲಾಂಜ್‍ಗಳನ್ನು ನಿರ್ಮಿಸಲಾಗುತ್ತದೆ.

ಅಲ್ಲಿ ಸಂಪೂರ್ಣ ವೈ-ಫೈ ವ್ಯವಸ್ಥೆ ಇರಲಿದೆ.ಇದರ ಜತೆಗೆ ಪಕ್ಷದ ಅಧ್ಯಕ್ಷ ಅಮಿತ್‍ಶಾಗೂ ತಾತ್ಕಾಲಿಕ ಕಚೇರಿ ವ್ಯವಸ್ಥೆ ಮಾಡಲಾಗಿದೆ.

ಇನ್ನು ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಬಿಜೆಪಿ ನಾಯಕರ ದಂಡೇ ಬೀಡು ಬಿಟ್ಟಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ