
ಬೆಂಗಳೂರು,ಜ.11- ಚುನಾವಣೆ ಮಹಾಸಮರಕ್ಕೆ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆ, ವಿರೋಧ ಪಕ್ಷಗಳನ್ನು ಎದುರಿಸುವ ರೀತಿ, ಚುನಾವಣಾ ರಣತಂತ್ರ, ಪ್ರಣಾಳಿಕೆ ಸಿದ್ಧಪಡಿಸುವಿಕೆ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಸೋಲಿನ ಕುರಿತು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಲಿದೆ.
ರಾಜ್ಯ ಘಟಕ ಲೋಕಸಭಾ ಚುನಾವಣೆಗೆ ನಡೆಸಿರುವ ಸಿದ್ಧತೆ ಕುರಿತು ಪರಾಮರ್ಶೆ ನಡೆಯಲಿದೆ. ಈಗಾಗಲೇ ವಿವಿಧ ಲೋಕಸಭಾ ಕ್ಷೇತ್ರಗಳ ಸ್ಥಳೀಯ ನಾಯಕರನ್ನು ಕರೆಸಿಕೊಂಡು ಅಭಿಪ್ರಾಯ ಸಂಗ್ರಹ ಮಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈ ಕುರಿತು ಸಮಗ್ರ ಮಾಹಿತಿಯನ್ನು ಸಭೆಯ ಮುಂದಿಡಲಿದ್ದಾರೆ.
ಅಭ್ಯರ್ಥಿಗಳ ಆಯ್ಕೆಯ ಮಾನದಂಡ, ಯಾವ ನಾಯಕರಿಗೆ ಅವಕಾಶ ನೀಡಬೇಕು, ಹಾಲಿ ಸಂಸದರಲ್ಲಿ ಯಾರನ್ನು ಕೈಬಿಡಬೇಕು, ಪ್ರಚಾರ ತಂತ್ರ, ಟಿಕೆಟ್ ಹಂಚಿಕೆ, ಮುಖಂಡರ ಹಾಗೂ ಪದಾಧಿಕಾರಿಗಳಿಗೆ ಚುನಾವಣಾ ಪ್ರಚಾರದ ಜವಾಬ್ದಾರಿ ವಹಿಸುವಿಕೆ ಸೇರಿದಂತೆ ಇತರೆ ವಿಷಯಗಳ ಕುರಿತು ವಿಸ್ತೃತ ವರದಿಯನ್ನು ಷಾ ಅವರಿಗೆ ಸಲ್ಲಿಸಲಿದ್ದಾರೆ ಎಂದು ಬಿಜೆಪಿಯ ಆಪ್ತ ಮೂಲಗಳು ತಿಳಿಸಿವೆ.
ಆಪರೇಷನ್ ಕಮಲಕ್ಕೆ ಪುಷ್ಠಿ :
ಕಾರ್ಯಕಾರಿಣಿ ನಡೆದ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯದ ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳ ಜೊತೆಗೆ ಪ್ರತ್ಯೇಕ ಸಭೆ ನಡೆಸಿ ರಾಜ್ಯ ರಾಜಕೀಯದ ವಿದ್ಯಮಾನಗಳ ಕುರಿತು ಚರ್ಚಿಸಲಿದ್ದಾರೆ.
ರಾಜ್ಯದ ಎಲ್ಲ ಶಾಸಕರು, ಜನಪ್ರತಿನಿಧಿಗಳನ್ನು ಬಿಜೆಪಿ ದೆಹಲಿಗೆ ಕರೆಸಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಹಂಚಿಕೆಯ ಬಳಿಕ ಉದ್ಭವಿಸಿದ ವಿವಾದ ಆಪರೇಷನ್ ಕಮಲದ ಸಾಧ್ಯತೆಗೆ ಮತ್ತಷ್ಟು ಪುಷ್ಠಿ ನೀಡಿದೆ.
ಇಂದು ಮತ್ತು ನಾಳೆ ನಡೆಯುವ ಕಾರ್ಯಕಾರಿಣಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಉದ್ಘಾಟಿಸಲಿದ್ದು, ನಾಳೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.