ತೃಣಮೂಲ ಕಾಂಗ್ರೆಸ್ ಸಂಸದ ಸೌಮಿತ್ರ ಖಾನ್ ಬಿಜೆಪಿಗೆ ಸೇರ್ಪಡೆ

ಕೋಲ್ಕತ್ತಾ/ನವದೆಹಲಿ, ಜ.10- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾಘಟ್ ಬಂಧನ್ ಮೂಲಕ ಪ್ರಧಾನಿ ಅಭ್ಯರ್ಥಿ ಆಗುವ ಕನಸು ಕಾಣುತ್ತಿರುವ ಬೆನ್ನಲ್ಲೇ ಇದೀಗ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಭಾರೀ ಹಿನ್ನಡೆಯಾಗಿದೆ.

ಟಿಎಂಸಿಯ ಸಂಸದ ಸೌಮಿತ್ರ ಖಾನ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಬಿಸ್ನುಪುರ್ ಕ್ಷೇತ್ರದ ಸಂಸದರಾಗಿರುವ ಖಾನ್ ಅವರು ಟಿಎಂಸಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬೋಲ್‍ಪುರ್ ಲೋಕಸಭಾ ಕ್ಷೇತ್ರದ ಅನುಪಮ್ ಹಜ್ರಾ ಅವರು ಕೂಡ ಬಿಜೆಪಿಗೆ ಸದ್ಯದಲ್ಲೇ ಸೇರ್ಪಡೆಯಾಗುವ ನಿರೀಕ್ಷೆ ಇದ್ದು, ಟಿಎಂಸಿಗೆ ಮತ್ತೊಂದು ಆಘಾತವಾಗಿದೆ.

ಅನುಪಮ್ ಸೇರ್ಪಡೆ ನಂತರ ಟಿಎಂಸಿ ಸಂಸದರಾದ ಅರ್ಪಿತಾಘೋಷ್ ಮತ್ತು ಸತಾಬ್ಡಿರಾಯ್ ಅವರೂ ಸಹ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವರದಿಗಳಿವೆ.
ಪಶ್ವಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಬದಲಿಗೆ ಖಾಸಗಿ ಕಂಪೆನಿಯಂತಾಗಿದೆ ಎಂದು ಬಿಜೆಪಿಗೆ ಸೇರ್ಪಡೆಯಾಗಿರುವ ಖಾನ್ ಲೇವಡಿ ಮಾಡಿದ್ದಾರೆ.

ಅಲ್ಲದೆ, ಇನ್ನೂ ಆರು ಮಂದಿ ಟಿಎಂಸಿ ಸಂಸದರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿರುವುದು ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.

ಲೋಕಸಭೆ ಚುನಾವಣೆಗೂ ಮುನ್ನವೇ ಪಶ್ವಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ದೀದಿ ನೇತೃತ್ವದ ಟಿಎಂಸಿಗೆ ದೊಡ್ಡ ಪೆಟ್ಟು ಬಿದ್ದಿದೆ.
ಜ.19ರಂದು ಕೋಲ್ಕತ್ತಾದಲ್ಲಿ ಟಿಎಂಸಿ ಬೃಹತ್ ರ್ಯಾಲಿ ಮತ್ತು ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಲು ಮಮತಾ ಬ್ಯಾನರ್ಜಿ ಸಜ್ಜಾಗಿರುವಾಗಲೇ ಕಂಡು ಬಂದಿರುವ ಈ ಬೆಳವಣಿಗೆ ಪಕ್ಷದಲ್ಲಿ ಆತಂಕದ ಅಲೆ ಸೃಷ್ಟಿಸಿದೆ.

2017ರ ನವೆಂಬರ್ ನಲ್ಲಿ ರಾಜ್ಯಸಭಾ ಸಂಸದ ಮುಕುಲ್ ರಾಯ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಟಿಎಂಸಿಯ ಎರಡನೇ ನಾಯಕರಾಗಿ ಗುರುತಿಸಿಕೊಂಡಿದ್ದ ಮುಕುಲ್, ಈಗ ದೀದಿ ಪಕ್ಷದ ಸಂಸದರನ್ನು ಬಿಜೆಪಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಪಶ್ಚಿಮ ಬಂಗಾಳದಲ್ಲಿ ಸಿಂಡಿಕೇಟ್ ರಾಜ್ ಮತ್ತು ಪೊಲೀಸ್ ರಾಜ್ ಪರಿಸ್ಥಿತಿ ನಿರ್ಮಾಣವಾಗಿದೆ. ದಿನ ಕಳೆದಂತೆ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ತೃಣಮೂಲ ಕಾಂಗ್ರೆಸ್ ಗೂಂಡಾಗಳಿಗೆ ಬೆಂಬಲ ನೀಡುತ್ತಿದೆ. ದಿನ ಬೆಳಗೆದ್ದರೆ ರಾಜ್ಯದಲ್ಲಿ ಕೊಲೆ ಮತ್ತು ಬಾಂಬ್ ದಾಳಿಗಳು ನಡೆಯುತ್ತಿವೆ ಎಂದು ಟಿಎಂಸಿ ವಿರುದ್ಧ ಬಂಡಾಯ ಸಂಸದರು ಕಿಡಿಕಾರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ