ಜ.12ರಂದು ತಮಿಳುನಾಡು ಧೋರಣೆ ಖಂಡಿಸಿ ಅತ್ತಿಬೆಲೆ ಬಂದ್

ಬೆಂಗಳೂರು, ಜ.10- ಮೇಕೆದಾಟು ಯೋಜನೆಗೆ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ವಿರುದ್ಧ ಇದೇ 12ರಂದು ನಗರಕ್ಕೆ ಸಮೀಪ ಇರುವ ತಮಿಳುನಾಡಿನ ಗಡಿಭಾಗವಾದ ಅತ್ತಿಬೆಲೆ ಬಂದ್ ಕರೆ ನೀಡಲು ನಿರ್ಧರಿಸಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಆದರೂ ಕ್ಯಾತೆ ತೆಗೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ಈ ಯೋಜನೆ ಅನುಷ್ಠಾನದ ವಿಷಯದಲ್ಲಿ ಮಂದ ಧೋರಣೆ ಅನುಸರಿಸುತ್ತಿದೆ.ಮೇಕೆದಾಟು ಜಲಾಶಯದಿಂದ ವಿದ್ಯುತ್‍ಚ್ಛಕ್ತಿ ತಯಾರಿಕೆ, ಕುಡಿಯುವ ನೀರಿಗೆ ಅನುಕೂಲವಾಗಲಿದೆ.ಸಮುದ್ರಕ್ಕೆ ಹೋಗುವ ಹೆಚ್ಚುವರಿ ನೀರನ್ನು ತಡೆದು ಮೇಕೆದಾಟು ಯೋಜನೆ ಆರಂಭಿಸಲಾಗುತ್ತದೆ.ಇದರಿಂದ ತಮಿಳುನಾಡಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇದನ್ನು ಅಲ್ಲಿನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ಸರ್ಕಾರ ಕೂಡಲೇ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು, ಕೂಡಲೇ ನೀಲನಕ್ಷೆ ತಯಾರಿಸಬೇಕು, ಯೋಜನೆಗೆ ಎಷ್ಟು ಹಣ ವೆಚ್ಚವಾಗುತ್ತದೆ ಎಂಬುದನ್ನು ನಿಗದಿಪಡಿಸಬೇಕು, ಎಷ್ಟು ವರ್ಷದಲ್ಲಿ ಪೂರ್ಣಗೊಳ್ಳುತ್ತದೆ ಎಂಬುದನ್ನು ಪ್ರಕಟಿಸಬೇಕು ಹಾಗೂ ಇದಕ್ಕಾಗಿ ವಿಶೇಷ ಕಾರ್ಯತಂತ್ರ ರೂಪಿಸಬೇಕೆಂದು ವಾಟಾಳ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ