ನವದೆಹಲಿ: ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಾಂವಿಧಾನಿಕ ಪೀಠ ಅಯೋಧ್ಯಾ ರಾಮಜನ್ಮಭೂಮಿ ವಿವಾದ ಪ್ರಕರಣದ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಲಿದೆ. ಈ ವೇಳೆ ಮುಂದಿನ ವಿಚಾರಣೆ ಪ್ರಕ್ರಿಯೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ.
ಜ.4ರಂದು ಒಂದೇ ನಿಮಿಷದಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ರಂಜನ್ ಗೊಗೊಯಿ ನೇತೃತ್ವದ ಪೀಠ, “ಅಯೋಧ್ಯೆ ಪ್ರಕರಣದ ತನಿಖಾ ವಿಚಾರದಲ್ಲಿ ಮುಂದಿನ ಆದೇಶವನ್ನು ಜನವರಿ 10 ರಂದು ನೀಡಲಾಗುವುದು” ಎಂದಿತ್ತು. ಅಲ್ಲದೆ, ಪ್ರಕರಣವನ್ನು ಹೊಸ ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡುವುದಾಗಿ ಮಂಗಳವಾರ ತಿಳಿಸಿತ್ತು. ಈ ಹೊಸ ಪೀಠದಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಉದಯ್ ಲಲಿತ್, ಎಸ್.ಎ ಬೊಬ್ಡೆ, ಎಸ್.ವಿ. ರಮಣ್ ಇದ್ದಾರೆ. ರಂಜನ್ ಗೊಗೊಯಿ ಈ ಪೀಠದ ನೇತೃತ್ವ ವಹಿಸಿದ್ದಾರೆ.
ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಹಾಗೂ ರಾಮಲಲ್ಲಾ ಟ್ರಸ್ಟ್ಗೆ ವಿವಾದಿತ ಪ್ರದೇಶದ 2.77 ಎಕರೆ ಜಾಗವನ್ನುಸಮಾನಾಗಿ ಹಂಚಿ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ 14 ಅರ್ಜಿಗಳು ಸಲ್ಲಿಕೆ ಆಗಿದ್ದವು. ಇತ್ತೀಚಿಗೆ ಸಂದರ್ಶನದಲ್ಲಿ
ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಆದೇಶ ಬಂದ ನಂತರ ಆ ಬಗ್ಗೆ ಚಿಂತನೆ ಮಾಡುವುದಾಗಿ ಹೇಳಿದರು. ಹೀಗಾಗಿ ಈ ವಿಚಾರಣೆ ಮಹತ್ವ ಪಡೆದುಕೊಂಡಿದೆ. ಸದ್ಯ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಹಿಂದು ಸಂಘಟನೆಗಳು ಒತ್ತಡ ಹೇರುತ್ತಿವೆ.