ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚದ ಪತ್ನಿ

ಮೈಸೂರು, ಜ.9-ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯೇ ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಉದಯಗಿರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಇಲ್ಲಿನ ಸತ್ಯನಗರದ ನಿವಾಸಿ ಮಹಮ್ಮದ್ ಪಾಷ (45) ಸುಟ್ಟ ಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಕಳೆದ 23 ವರ್ಷಗಳ ಹಿಂದೆ ಮಮ್ತಾಜ್ ಎಂಬುವವರನ್ನು ಮಹಮ್ಮದ್ ಪಾಷ ಮದುವೆಯಾಗಿದ್ದು, ಇವರಿಗೆ ಆರು ಮಂದಿ ಮಕ್ಕಳಿದ್ದಾರೆ.

ಸತ್ಯನಗರದಲ್ಲಿ ಈ ಕುಟುಂಬ ವಾಸವಾಗಿದ್ದು, ಆಟೋ ಚಾಲಕರಾಗಿ ಮಹಮ್ಮದ್ ಪಾಷ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ಮಹಮ್ಮದ್ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಪತ್ನಿ ಪ್ರತಿನಿತ್ಯ ಜಗಳವಾಡುತ್ತಿದ್ದರು ಎನ್ನಲಾಗಿದೆ.

ನಿನ್ನೆ ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ ಮೇಲೆ ಮಮ್ತಾಜ್ ಪತಿಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸುಟ್ಟ ಗಾಯಗಳಿಂದ ಕೂಗಾಡುತ್ತಿದ್ದುದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಇವರ ಮನೆಗೆ ಬಂದು ಬೆಂಕಿ ನಂದಿಸಿ ಮಹಮ್ಮದ್ ಅವರನ್ನು ಕೆಆರ್ ಆಸ್ಪತ್ರೆಗೆ ಕರೆದೊಯ್ದಿದ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.

ಮಹಮ್ಮದ್ ಪಾಷ ಸುಟ್ಟ ಗಾಯಗಳಿಂದಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಬಗ್ಗೆ ಉದಯಗಿರಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮಮ್ತಾಜ್‍ಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ