2018-19ನೆ ಸಾಲಿನಲ್ಲಿ ಭಾರತದ ಜಿಡಿಪಿ ಶೇ.7.3ಕ್ಕೆ ಏರಿಕೆ ಸಾಧ್ಯತೆ

ನವದೆಹಲಿ, ಜ.9- 2018-19ನೆ ಸಾಲಿನಲ್ಲಿ ಭಾರತದ ದೇಶೀಯ ಒಟ್ಟು ಉತ್ಪನ್ನ (ಜಿಡಿಪಿ) ಶೇ.7.3ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ಭವಿಷ್ಯ ನುಡಿದಿದೆ.

ನಿನ್ನೆ ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರುವ ಆರ್ಥಿಕ ಮುನ್ಸೂಚನಾ ವರದಿಯಲ್ಲಿ ವಿಶ್ವ ಬ್ಯಾಂಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಪ್ರಮಾಣ 7.5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.

ವಿಶ್ವದ ಇತರೆ ದೇಶಗಳ ಆರ್ಥಿಕತೆಗೆ ಹೋಲಿಕೆ ಮಾಡಿದರೆ ಭಾರತ ದೇಶದ ಆರ್ಥಿಕತೆ ಬಲಿಷ್ಠವಾಗಿದ್ದು, ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಕೂಡ ಇದೆ. ಭಾರತೀಯ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ವಿಶ್ವ ಬ್ಯಾಂಕ್‍ನ ಆರ್ಥಿಕ ನಿರೀಕ್ಷಣಾ ವರದಿ ವಿಭಾಗದ ನಿರ್ದೇಶಕ ಅಹಹಾನ್ ಕೋಸ್ ಟಿ ಹೇಳಿದ್ದಾರೆ.

ಭಾರತಕ್ಕೆ ಹೋಲಿಕೆ ಮಾಡಿದರೆ ಚೀನಾದ ಆರ್ಥಿಕತೆ ಅಬಿವೃದ್ಧಿ ವೇಗ ಕುಂಠಿತವಾಗಿದ್ದು, 2019ನೇ ಸಾಲಿನಲ್ಲಿ ಚೀನಾದ ಜಿಡಿಪಿ 6.2ಕ್ಕೆ ಇಳಿಕೆಯಾಗುವ ಸಾಧ್ಯತೆ ಇದ್ದು, ಆ ಬಳಿಕದ 2 ವರ್ಷಗಳಲ್ಲಿ ಮತ್ತೆ ಶೇ.6ಕ್ಕೆ ಕುಸಿತವಾಗುವ ಅಪಾಯವಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿತೆ ನೀಡಿದೆ. 2018ರಲ್ಲಿ ಚೀನಾ ಆರ್ಥಿಕತೆ ಅಭಿವೃದ್ಧಿ ದರ ಶೇ.6.5ಕ್ಕೆ ಏರಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಚೀನಾದ ಆರ್ಥಿಕ ನೀತಿಯಲ್ಲು ತಿದ್ದುಪಡಿಯಂತಹ ಕಠಿಣ ನಿಯಮಗಳಿಂದಾಗಿ ಆರ್ಥಿಕ ಅಭಿವೃದ್ಧಿ ಕುಸಿತವಾಗಿದೆ ಎಂದು ವಿಶ್ವ ಬ್ಯಾಂಕ್ ವಿಶ್ಲೇಷಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ