ಬೆಂಗಳೂರು,ಜ.9-ಸುಮಾರು 12 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 4 ಸಾವಿರ ಚ.ಅಡಿ ವಿಸ್ತೀರ್ಣದ ಪಾಲಿಕೆಯ ಸ್ವತ್ತನ್ನು ಕಾಂಗ್ರೆಸ್ ಮುಖಂಡರು ಕಬಳಿಸಿದ್ದಾರೆ ಎಂದು ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಮಾಜಿ ಸಚಿವ ರೋಷನ್ ಬೇಗ್, ಶಾಸಕ ಎನ್.ಎ.ಹ್ಯಾರೀಸ್, ಮಾಜಿ ಪಾಲಿಕೆ ಸದಸ್ಯ ಎಂ.ಬಿ.ಗೋವಿಂದ ರಾಜು ಸೇರಿದಂತೆ 43 ಜನರ ಮೇಲೆ ಸರ್ಕಾರಿ ನೆಲ ಕಬಳಿಕೆ, ಅತಿಕ್ರಮ ಪ್ರವೇಶ, ವಂಚನೆ, ಮತ್ತು ಅಧಿಕಾರ ದುರುಪಯೋಗ ಸೇರಿದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಕಚೇರಿಗೆ ಹೊಂದಿಕೊಂಡಂತಿರುವ 4ಸಾವಿರ ಚ.ಅಡಿ ಪಾಲಿಕೆ ಸ್ವತ್ತನ್ನು ಕಾಂಗ್ರೆಸ್ ಮುಖಂಡರು ಸದ್ದಿಲ್ಲದೇ ಕಬಳಿಸಿದ್ದಾರೆ.
1876ರಲ್ಲಿ ಲಾರ್ಡ್ ಮಿಲ್ಲರ್ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ದಂಡು ಪ್ರದೇಶದ ಬ್ರಿಟಿಷ್ ಅಧಿಕಾರಿಗಳ, ನೌಕರರ ಮತ್ತು ಸುತ್ತಮುತ್ತಲಿನ ನಾಗರಿಕರ ಉಪಯೋಗಕ್ಕೆ ಮಿಲ್ಲರ್ ಕೆರೆ ನಿರ್ಮಿಸಿದ್ದರು.
ಬೆಂಗಳೂರು ಉತ್ತರ ತಾಲೂಕು, ಕಸಬಾ ಹೋಬಳಿಯ ಬಿಳೇಕಳ್ಳಿ ಗ್ರಾಮದ ಸರ್ವೇ ನಂ.16, 17, 18 ಮತ್ತು 19ರ 41 ಎಕರೆ ಸರ್ಕಾರಿ ಬಿ ಕರಾಬು ಜಾಗದಲ್ಲಿ ಸದರಿ ಕೆರೆ ನಿರ್ಮಾಣವಾಗಿತ್ತು.
ಬೆಂಗಳೂರು ನಗರ ಬೆಳೆದಂತೆಯೇ. ಪ್ರತಿಷ್ಠಿತ ಪ್ರದೇಶದಲ್ಲಿದ್ದ ಮಿಲ್ಲರ್ ಕೆರೆ ಕಣ್ಮರೆಯಾಯಿತು. ಹೀಗೆ ಬತ್ತಿ ಹೋಗಿದ್ದ 41 ಎಕರೆ ವಿಸ್ತೀರ್ಣದ ಸರ್ಕಾರಿ ಬಿ ಕರಾಬು ಸ್ವತ್ತು ಪಾಲಿಕೆ ಸುಪರ್ದಿಗೆ ಒಳಪಟ್ಟಿತ್ತು.
41 ಎಕರೆಗಳ ಪೈಕಿ 24 ಎಕರೆಗಳಷ್ಟು ಜಾಗವನ್ನು 28 ಸಂಘ-ಸಂಸ್ಥೆಗಳಿಗೆ 30ರಿಂದ 99 ವರ್ಷಗಳ ಅವಧಿಗೆ ಗುತ್ತಿಗೆಗೆ ಪಾಲಿಕೆ ನೀಡಿದೆ. ಉಳಿದ 17 ಎಕರೆಗಳಷ್ಟು ವಿಸ್ತೀರ್ಣದ ಸುಮಾರು 2,200 ಕೋಟಿ ಮೌಲ್ಯದ ಪಾಲಿಕೆ ಸ್ವತ್ತು ನೆಲಗಳ್ಳರ ಪಾಲಾಗಿದೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಮಿಲ್ಲರ್ ಟ್ಯಾಂಕ್ ಬಂಡ್ ಏರಿಯಾದಲ್ಲಿ ಪ್ರತಿ ಚ.ಅಡಿ ನೆಲಕ್ಕೆ 30 ಸಾವಿರದಿಂದ 40 ಸಾವಿರಗಳಷ್ಟಿದೆ.
ಮಿಲ್ಲರ್ ಟ್ಯಾಂಕ್ ಬಂಡ್ ಪ್ರದೇಶದಲ್ಲಿ 2 ಸ್ವತ್ತುಗಳನ್ನು ಪಾಲಿಕೆಯು ಗುತ್ತಿಗೆಗೆ ನೀಡಿದೆ. 12/01ನೇ ನಂಬರಿನ ಸ್ವತ್ತನ್ನು ಡಿ.17, 1993ರಂದು 99 ವರ್ಷಗಳಿಗೆ ಹಾಗೂ 14/01ನೇ ನಂಬರಿನ ಸ್ವತ್ತನ್ನು ಸೆ.15, 2004ರಂದು 30 ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ.
ಎರಡು ಪ್ರತ್ಯೇಕ ಅವಧಿಗಳಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷಕ್ಕೆ ಗುತ್ತಿಗೆ ನೀಡಿರುವ ಎರಡು ಸ್ವತ್ತುಗಳ ಒಟ್ಟು ವಿಸ್ತೀರ್ಣ 36,457.5 ಚ.ಅಡಿಗಳಾಗಿವೆ ಎಂದರು.
ಅಂತೆಯೇ ಕೆಪಿಸಿಸಿ ಕಚೇರಿಗೆ ಹೊಂದಿಕೊಂಡಂತಿರುವ 12,024 ಚ.ಅಡಿ ವಿಸ್ತೀರ್ಣದ ಸ್ವತ್ತನ್ನು ಎಸ್ಸಿ/ಎಸ್ಟಿ ಗ್ರ್ಯಾಜುಯೇಷನ್ ಅಸೋಸಿಯೇಷನ್ಗೆ ಜೂ.6,1977ರಂದು 99 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು.
ಈಗಾಗಲೇ ಅಸೋಸಿಯೇಷನ್ ಗುತ್ತಿಗೆಯ ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ ಪಾಲಿಕೆಯು ಆ ಸ್ವತ್ತನ್ನು ವಾಪಸ್ಸು ಪಡೆದುಕೊಳ್ಳಲು ಕಾನೂನು ಪ್ರಕರಣ ದಾಖಲಿಸಿದೆ.
ನಿಗದಿತ ಸಮಯದಲ್ಲಿ ಕಟ್ಟಡ ನಿರ್ಮಾಣ ಮಾಡದೇ ಷರತ್ತು ಉಲ್ಲಂಘಿಸಿದ್ದು, ಈ ಬಗ್ಗೆ ಪಾಲಿಕೆ ಹಲವಾರು ಬಾರಿ ನೋಟೀಸ್ ನೀಡಿದೆ. ಇದೀಗ ತನ್ನ ಕಚೇರಿಯ ಪಕ್ಕದ ಸ್ವತ್ತು ಖಾಲಿ ಇದ್ದಿದ್ದರಿಂದ ಅದನ್ನು ಕಬಳಿಸಲು ಕೆಪಿಸಿಸಿ ಸಂಚು ರೂಪಿಸಿದೆ ಎಂದು ದೂರಿದ್ದಾರೆ.
ಅಸೋಸಿಯೇಷನ್ಗೆ ಗುತ್ತಿಗೆ ನೀಡಿದ್ದ 12,024 ಚ.ಅಡಿ ಸ್ವತ್ತಿನ ಪೈಕಿ ಸುಮಾರು 12ರಿಂದ 15 ಕೋಟಿ ರೂ. ಮೌಲ್ಯದ 4 ಸಾವಿರ ಚ.ಅಡಿ ವಿಸ್ತೀರ್ಣದ ಸ್ವತ್ತನ್ನು ಕೆಪಿಸಿಸಿ ರಾತ್ರೋರಾತ್ರಿ ಕಬಳಿಸಿದೆ ಎಂದು ಆರೋಪಿಸಿದ್ದಾರೆ.