ಪೌರತ್ವ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಭಾರೀ ಗದ್ದಲ

ನವದೆಹಲಿ, ಜ.9- ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ವಿಚಾರ ಇಂದು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿ ಭಾರೀ ಪ್ರತಿಭಟನೆ ಮತ್ತು ಗದ್ದಲಕ್ಕೆ ಕಾರಣವಾಗಿ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಆರ್ಥಿಕ ದುರ್ಬಲ ಮೇಲ್ಜಾತಿಯವರಿಗೆ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ತಾವರ ಚಂದ ಗೆಹ್ಲೋಟ್ ಮಂಡಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಟಿಡಿಪಿ ಸದಸ್ಯರು ಪೌರತ್ವ ತಿದ್ದುಪಡಿ ವಿಧೇಯಕವನ್ನು ಪ್ರಸ್ತಾಪಿಸಿ ಗಲಾಟೆ ಮಾಡಿದರು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೂ ಈ ಮಸೂದೆಯಲ್ಲಿ ಅವಕಾಶ ನೀಡಿರುವುದನ್ನು ವಿರೋಧಿಸಿದ ಕಾಂಗ್ರೆಸ್ ಸದಸ್ಯರು ಸಭಾಪತಿಯವರ ಪೀಠದ ಮುಂದಿನ ಸ್ಥಳಕ್ಕೆ ದಾವಿಸಿ ಧರಣಿ ನಡೆಸಿ ಏರಿದ ಧ್ವನಿಯಲ್ಲಿ ಘೋಷಣೆ ಕೂಗಿದರು.

ಗೃಹ ಸಚಿವರು ಈ ಬಗ್ಗೆ ಸದನಕ್ಕೆ ಆಗಮಿಸಿ ಹೇಳಿಕೆ ನೀಡುವಂತೆ ಕಾಂಗ್ರೆಸ್ ನಾಯಕ ಆನಂದ್‍ಶರ್ಮ ಒತ್ತಾಯಿಸಿದರು. ಗಲಭೆ ತೀವ್ರಗೊಂಡಾಗ ಸಾರ್ವಜನಿಕ ಹಿತಾಸಕ್ತಿಯ ವಿಷಯವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಬಹುದು ಎಂದು ಉಪಸಭಾಪತಿ ಹರಿವಂಶ್ ಮನವಿ ಮಾಡಿದ್ದರೂ ಧರಣಿ ಮುಂದುವರಿದಿತ್ತು. ಇದರಿಂದ ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಿದರು.

ಮತ್ತೆ ಕಲಾಪ ಸಮಾವೇಶಗೊಂಡಾಗಲೂ ಇದೇ ಪರಿಸ್ಥಿತಿ ಮರುಕಳಿಸಿ ಸದನವನ್ನು ಮಧ್ಯಾಹ್ನ 2 ಗಂಟೆಗೆ ಉಪಸಭಾಪತಿ ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ