ಬೆಂಗಳೂರು,ಜ.9- ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಡಪಕ್ಷಗಳ ನೇತೃತ್ವದಲ್ಲಿ ಕರೆ ಕೊಟ್ಟಿರುವ ಭಾರತ್ ಬಂದ್ಗೆ 2ನೇ ದಿನವಾದ ಇಂದು ನೀರಸ ಪ್ರತಿಕ್ರಿಯೆ ಕಂಡುಬಂದಿದೆ.
ರಾಜ್ಯದ ಬಹುತೇಕ ಎಲ್ಲ ಕಡೆ ಬಸ್ ಸಂಚಾರ ಆರಂಭವಾಗಿದ್ದು, ಟ್ಯಾಕ್ಸಿ , ಆಟೋ ರಸ್ತೆಗಿಳಿದಿವೆ. ಅಂಗಡಿ, ವಾಣಿಜ್ಯ ವಹಿವಾಟು ಸಹಜ ಸ್ಥಿತಿಗೆ ಮರಳಿದೆ. ಆದರೆ ಕೆಲವು ಕಡೆ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳನ್ನು ಜಖಂಗೊಳಿಸಿದ್ದಾರೆ.
ಹುಬ್ಬಳ್ಳಿ, ಬಾಗಲಕೋಟೆ, ಕೊಪ್ಪಳ ಸೇರಿದಂತೆ ಆರು ಕಡೆ ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಕಲ್ಲು ಎಸೆದ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಬೆಂಗಳೂರಿನ ಚಿಕ್ಕಜಾಲ, ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ಒಟ್ಟು ಆರು ಕಡೆ ಬಸ್ಗಳ ಮೇಲೆ ಕಲ್ಲೆಸೆಯಲಾಗಿದೆ.
ನೆಲಮಂಗಲದ ಮಾಕಳ್ಳಿ ಬಳಿ ಧರ್ಮಸ್ಥಳದಿಂದ ಬಾಗೇಪಲ್ಲಿಗೆ ಹೊರಟ್ಟಿದ್ದ ಬಸ್ಗಳ ಮೇಲೆ ಪ್ರತಿಭಟನಾ ನಿರತರು ದಾಳಿ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ಮಾಚೋಹಳ್ಳಿಯಲ್ಲಿ ಮಾಗಡಿ-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಬಸ್ ಮೇಲೂ ಕಲ್ಲೆಸೆಯಲಾಗಿದೆ.
ನಗರದಲ್ಲಿ ಇಂದು ಹತ್ತಾರು ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಿದ ಪರಿಣಾಮ ಬಿಎಂಟಿಸಿ ಬಸ್ ಸಂಚಾರ ದಿಢೀರ್ ಸ್ಥಗಿತವಾಗಿದೆ.
ನಿನ್ನೆ ಆರಂಭವಾದ 2 ದಿನಗಳ ಬಂದ್ ವೇಳೆ ಈ ವರಗೊ ಒಟ್ಟು 27 ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದು, ಬಿಎಂಟಿಸಿ ಬಸ್ ಸಂಚಾರ ಬೆಂಗಳೂರಿನ ಹಲವೆಡೆ ದಿಢೀರ್ ಸ್ಥಗಿತಗೊಂಡಿದೆ. ಸಿಟಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬೆಳಗ್ಗೆ ಸಂಚಾರ ಸಾಮಾನ್ಯವಾಗಿತ್ತಾದರೂ ಬಸ್ ಗಳ ಮೇಲಿನ ಕಲ್ಲು ತೂರಾಟ ಸುದ್ದಿಗಳು ಪ್ರಸಾರವಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿನ ಬಸ್ ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಮೆಜೆಸ್ಟಿಕ್ ನಿಂದ ಬಸ್ ಗಳ ಸಂಚಾರ ವಿರಳವಾದ ಕಾರಣ ಆಟೋ, ಓಲಾ, ಉಬರ್ ಕ್ಯಾಬ್ ಗಳ ಸೇವಾದರದಲ್ಲಿ ಗಣನೀಯ ದರ ಏರಿಕೆ ಕಂಡುಬಂದಿದೆ. ಬಂದ್ ನ ಲಾಭ ಪಡೆಯಲು ಆಟೋ ಚಾಲಕರು ಮುಂದಾಗಿದ್ದು, ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.
ಇನ್ನು ಕೆಂಗೇರಿ ಬಸ್ ಡಿಪೊಗೆ ಬಸ್ ಗಳು ವಾಪಸ್ ಆಗುತ್ತಿದ್ದು, ಕಳೆದ ಕೆಲ ಗಂಟೆಗಳಲ್ಲೇ ಬೆಂಗಳೂರಿನ ವಿವಿಧೆಡೆ ಬಸ್ ಗಳ ಸಂಚಾರ ಸ್ಥಗಿತವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನು ಯಶವಂತಪುರ ಎಪಿಎಂಸಿ, ಕಲಾಸಿಪಾಳ್ಯ ಮಾರುಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಸಾಗಿದೆ.
ಎರಡು ದಿನ ಬಂದ್ಗೆ ಕರೆ ನೀಡಲಾಗಿತ್ತಾದರೂ ಇಂದು ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು. ರಾಜಧಾನಿ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ರಾಯಚೂರು, ಕೊಪ್ಪಳ ಸೇರಿದಂತೆ ಎಲ್ಲೆಡೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.
ನಿನ್ನೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಶಾಲಾಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ ಇಂದು ಶಾಲಾಕಾಲೇಜುಗಳು ಬಹುತೇಕ ಕಡೆ ಆರಂಭವಾಗಿದ್ದವು. ಬ್ಯಾಂಕ್ಗಳು ಕೂಡ ಎಂದಿನಂತೆ ತಮ್ಮ ವಹಿವಾಟು ಆರಂಭಿಸಿವೆ. ಎಪಿಎಂಸಿ, ಮಾರುಕಟ್ಟೆ, ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದರು.
ಪರದಾಡಿದ ಪ್ರಯಾಣಿಕರು:
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಬಸ್ಗಳ ಮೇಲೆ ಕೆಲವರು ಕಲ್ಲೆಸೆದ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಿನಿಂದಲೇ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರ ಮಾಹಿತಿ ಇಲ್ಲದೆ ಬೇರೆ ಬೇರೆ ಸ್ಥಳಗಳಿಗೆ ತೆರಳಲು ಆಗಮಿಸಿದ ನೂರಾರು ಪ್ರಯಾಣಿಕರು ಪರದಾಡಿದರು.
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಲ್ಲೂ ಇದೇ ಪರಿಸ್ಥಿತಿ ಕಂಡುಬಂದಿತು. ಪರಿಸ್ಥಿತಿ ಅನುಗುಣವಾಗಿ ಬಸ್ಗಳ ಸಂಚಾರ ಆರಂಭಿಸುವಂತೆ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.
ಗದಗದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಅಂತ್ಯಕ್ರಿಯೆಗೆ ಹೋಗಬೇಕಿದ್ದ ಕುಟುಂಬವೊಂದು ಬಸ್ ಇಲ್ಲದೆ ಪರದಾಡಿದ ಪರಿಸ್ಥಿತಿ ಎದುರಾಗಿತ್ತು.
ಇದೇ ವೇಳೆ ಬಸ್ಗಳಿಲ್ಲದೆ ಪರದಾಡುತ್ತಿದ್ದ ವಿದ್ಯಾರ್ಥಿಗಳಿಗೆ ಪೊಲೀಸರು ತಮ್ಮ ವಾಹನಗಳಲ್ಲೇ ಶಾಲಾಕಾಲೇಜುಗಳಿಗೆ ಕರೆದೊಯ್ದು ಮಾನವೀಯತೆ ತೋರಿದ ಪ್ರಸಂಗ ಗದಗ ಬೆಟಗೇರಿಯಲ್ಲಿ ನಡೆದಿದೆ.
ಮಾಗಡಿ-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಕೆಎ42-ಎಫ್220 ಸಂಖ್ಯೆಯ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ತಾವರೆಕೆರೆ ಸಮೀಪದ ಚೆನ್ನೇನಹಳ್ಳಿ , ಸಂಗದಾಸಿಪಾಳ್ಯ ಮತ್ತಿತತ ಕಡೆಯೂ ಬಸ್ಗಳಿಗೆ ಹಾನಿ ಮಾಡಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿಐಟಿಯು ಕಾರ್ಯಕರ್ತರು ಕೆಎಸ್ಆರ್ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ನಗರದ ಮುಖ್ಯ ಬಸ್ ನಿಲ್ದಾಣದ ಬಳಿ ಆಗಮಿಸಿದ ಕಾರ್ಯಕರ್ತರು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೊರಡಬೇಕಿದ್ದ ಬಸ್ಗಳನ್ನು ತಡೆಹಿಡಿದರು.
ರಾಯಚೂರು, ಬಳ್ಳಾರಿ ಹೊರತುಪಡಿಸಿ ಶಾಲಾ-ಕಾಲೇಜುಗಳಿಗಿಲ್ಲ ರಜೆ. ಎಂದಿನಂತೆ ಎಲ್ಲ ಶಾಲಾ-ಕಾಲೇಜುಗಳು ತೆರೆಯಲಿದ್ದು, ಪರೀಕ್ಷೆಗಳನು ಮುಂದೂಡಲಾಗಿದೆ.