ಬೆಂಗಳೂರು, ಜ.9-ರಾಜ್ಯ ರಾಜಕಾರಣದಲ್ಲಿ ಸಂಕ್ರಾಂತಿ ಹಬ್ಬದ ನಂತರ ಭಾರೀ ಬದಲಾವಣೆಯಾಗುವ ಸಂಭವವಿದ್ದು, ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಸಜ್ಜಾಗಿದೆ.
ಪ್ರಸ್ತುತ ನವದೆಹಲಿಯಲ್ಲಿ ಇರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಳಿ ಕರೆದೊಯ್ಯಲು ಸಜ್ಜಾಗಿದ್ದಾರೆ.
ಇದುವರೆಗೆ ಯಡಿಯೂರಪ್ಪ ಮತ್ತು ಅಮಿತ್ ಷಾ ಮುಖಾಮುಖಿ ಭೇಟಿ ಸಾಧ್ಯವಾಗಿಲ್ಲ. ಮಹಾರಾಷ್ಟ್ರ ಮೂಲದ ಕೇಂದ್ರದ ಪ್ರಭಾವಿ ಸಚಿವರೊಬ್ಬರು ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ತಿಳಿದುಬಂದಿದೆ. ಅಸಮಾಧಾನಗೊಂಡಿರುವ ಸುಮಾರು ಒಂದು ಡಜನ್‍ಗೂ ಅಧಿಕ ಶಾಸಕರು ಕಾಂಗ್ರೆಸ್‍ಗೆ ಕೈ ಕೊಡಲು ಸಿದ್ಧರಾಗಿದ್ದಾರೆÉ.
ಈಗಾಗಲೇ ನವದೆಹಲಿಯಲ್ಲಿ ಇರುವ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ, ಆನಂದ್‍ಸಿಂಗ್, ಆರ್.ಶಂಕರ್, ಮುಳಬಾಗಿಲು ನಾಗೇಶ್ ಮತ್ತಿತರರು ಅಮಿತ್ ಷಾ ಅವರನ್ನು ಭೇಟಿ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.
ಎಷ್ಟು ಶಾಸಕರು ಪಕ್ಷಕ್ಕೆ ಬರಲಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿರುವ ಅಮಿತ್ ಷಾ ಸರ್ಕಾರ ರಚನೆಗೆ ಅಗತ್ಯವಿರುವ ಶಾಸಕರು ಬರುವುದು ಖಾತ್ರಿಯಾಗುವವರೆಗೂ ಯಾವುದೇ ರೀತಿಯ ಭರವಸೆಯನ್ನು ರಾಜ್ಯ ನಾಯಕರಿಗೆ ನೀಡಿಲ್ಲ.
ಶುಕ್ರವಾರದಿಂದ ನವದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪರಿಷತ್ ಸಭೆ ನಡೆಯಲಿದೆ. ಕರ್ನಾಟಕದಿಂದ ಸುಮಾರು 480 ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ರಾಜ್ಯದಿಂದ ಆಗಮಿಸಲಿರುವ ಪದಾಧಿಕಾರಿಗಳಿಗೆ ವಸತಿ, ಊಟೋಪಚಾರ ಕಲ್ಪಿಸುವ ಉದ್ದೇಶದಿಂದ ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ನಿನ್ನೆ ದಿಢೀರನೆ ನವದೆಹಲಿಗೆ ತೆರಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೈ ಕೊಡಲಿರುವ ಶಾಸಕರು:
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಕೆಲವು ಅತೃಪ್ತ ಶಾಸಕರು ಪಕ್ಷಕ್ಕೆ ಕೈ ಕೊಡಲಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿಯು ಆಪರೇಷನ್ ಕಮಲ ನಡೆಸಲಿದೆ ಎಂಬ ವದಂತಿ ಹಬ್ಬಿತ್ತಾದರೂ ಅದು ಎರಡುಮೂರು ಬಾರಿ ಕೈಕೊಟ್ಟಿತ್ತು.
ಆದರೆ ರಾಜ್ಯ ನಾಯಕರಿಂದ ಸರ್ಕಾರವನ್ನು ಅಸ್ತಿರಗೊಳಿಸುವುದು ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ ಬಿಜೆಪಿಯ ಕೇಂದ್ರ ನಾಯಕರು ನೇರವಾಗಿಯೇ ಅಖಾಡಕ್ಕಿಳಿದಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಲ್ಲಿನ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್, ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಆಪರೇಷನ್ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಂಕ್ರಾಂತಿ ನಂತರ ಅತೃಪ್ತ ಶಾಸಕರು ಕಾಂಗ್ರೆಸ್‍ಗೆ ಕೈ ಕೊಟ್ಟು ಬಿಜೆಪಿಯತ್ತ ಮುಖ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್‍ನ ಅತೃಪ್ತ 12 ಜನ ಶಾಸಕರನ್ನು ಅಮಿತಾ ಶಾ ಅವರಿಗೆ ಭೇಟಿ ಮಾಡಿಸಿದ್ದು, ಮಂಗಳವಾರ ಸತತ ನಾಲ್ಕು ಗಂಟೆಗಳ ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ಸಭೆ ಯಶಸ್ವಿಯಾಗಿದ್ದು, ಸಂಕ್ರಾಂತಿ ಬಳಿಕ ಮೈತ್ರಿ ಸರ್ಕಾರ ಬೀಳಿಸಲು ಪ್ಲಾನ್ ಸಿದ್ಧವಾಗಿದೆ ಎನ್ನಲಾಗುತ್ತಿದೆ.
ಅವರನ್ನು ಪಕ್ಷಕ್ಕೆ ಸ್ವಾಗತಿಸಲು ಬಿಜೆಪಿ ಹೈಕಮಾಂಡ್ ಕೂಡ ಒಂದು ಹೆಜ್ಜೆ ಮುಂದೆ ಬಂದಿರುವದರಿಂದ ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಅಧಿಕಾರ ಪಡೆಯಲು ಬಿಜೆಪಿ ನಿರ್ಧಾರ ಮಾಡಿರುವಂತಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು ಬಿಜೆಪಿಯ ಬಲೆಗೆ ಸಿಲುಕಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು ಸದ್ಯದಲ್ಲಿಯೇ ರಾಜೀನಾಮೆ ನೀಡುತ್ತಾರೆ ಎನ್ನುವ ಊಹಾಫೋಹಗಳು ಸಂಕ್ರಾಂತಿ ಬಳಿಕ ಸತ್ಯವಾಗಲಿದೆಯೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಯಾರ್ಯಾರು ಕೈ ಕೊಡಲಿದ್ದಾರೆ:
ರಮೇಶ್ ಜಾರಕಿಹೊಳಿ
ಮಹಂತೇಶ್ ಕುಮಠಹಳ್ಳಿ
ಶ್ರೀಮಂತ್ ಪಾಟೀಲ್
ಬಿ.ಸಿ.ಪಾಟೀಲ್
ಬಿ.ನಾಗೇಂದ್ರ
ಆನಂದ್ ಸಿಂಗ್
ಗಣೇಶ್
ಪ್ರತಾಪ್ ಗೌಡ ಪಾಟೀಲ್
ಬಸವರಾಜ್ ದದ್ದೂರ್
ಆರ್.ಶಂಕರ್
ನಾಗೇಶ್