ನವದೆಹಲಿ, ಜ.8-ಮೋಟಾರು ವಾಹನ ತಿದ್ದುಪಡಿ ಮಸೂದೆ, ಕಾರ್ಮಿಕ ಕಾನೂನು ತಿದ್ದುಪಡಿ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಇಂದಿನಿಂದ ನಡೆಸುತ್ತಿರುವ ಎರಡು ದಿನ ಭಾರತ್ ಬಂಧ್ ಗೆ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ಕೆಲವೆಡೆ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಇಂದಿನ ಬಂದ್ ಶಾಂತಿಯುತವಾಗಿತ್ತು. 40 ಗಂಟೆಗಳ ಭಾರತ್ ಬಂದ್ ವೇಳೆ ದೇಶಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.
ಕಾರ್ಮಿಕ ಸಂಘಟನೆಗಳ ಭಾರತ್ ಬಂದ್ ಪ್ರತಿಭಟನಾ ಕರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 20 ಕೋಟಿ ಕಾರ್ಮಿಕರು ಭಾಗಿಯಾಗಿದ್ದಾರೆ ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ. ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿವೆ.
ಬಂದ್ ವೇಳೆ ಬ್ಯಾಂಕ್ ಹಾಗೂ ಸಾರಿಗೆ ಸೇವೆಗಳಲ್ಲಿ ವ್ಯತ್ಯಯವಾಗಿದ್ದರೂ, ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆಗಳು ಅಭಾದಿತ.
ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಪುದುಚೇರಿ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ಗಢ, ಬಿಹಾರ, ಪಂಜಾಬ್, ಹರಿಯಾಣ, ಜಾರ್ಖಂಡ್, ಗೋವಾ, ಮಣಿಪುರ, ಅಸ್ಸಾಂ, ಮೇಘಾಲಯಗಳಲ್ಲಿ ಭಾರತ್ ಬಂದ್ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಮಹಾ ಪ್ರಧಾನ ಕಾರ್ಯದರ್ಶಿ ಅಮರ್ಜೀತ್ ಕೌರ್ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೂರಸಂಪರ್ಕ, ಆರೋಗ್ಯ, ಶಿಕ್ಷಣ, ಕಲ್ಲಿದ್ದಲು, ಉಕ್ಕು, ವಿದ್ಯುತ್, ಬ್ಯಾಂಕಿಂಗ್, ವಿಮಾ, ಸಾರಿಗೆ ಮತ್ತಿತರ ಕ್ಷೇತ್ರಗಳು ಎರಡು ದಿನ ಸಂಪೂರ್ಣ ಬೆಂಬಲ ನೀಡಿವೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಬಾಹುಳ್ಯವಿರುವ ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ಲಭಿಸಿದೆ.
ಭಾರತ್ ಬಂದ್ ವೇಳೆ ಕೆಲವು ರಾಜ್ಯಗಳಲ್ಲಿ ಬ್ಯಾಂಕ್, ಸಾರಿಗೆ ಸೇರಿ ಹಲವು ಸೇವೆಗಳಲ್ಲಿ ವ್ಯತ್ಯಯವಾಗಿದ್ದರಿಂದ ಜನಜೀವನಕ್ಕೆ ಅಡ್ಡಿಯಾಯಿತು. ಖಾಸಗಿ ಕ್ಯಾಬ್ಗಳು ಮತ್ತು ಆಟೋರಿಕ್ಷಾಗಳು ಸಂಚಾರ ವಿರಳವಾಗಿತ್ತು. ಬಂದ್ ಪ್ರಯುಕ್ತ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸರ್ಕಾರ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದರೂ ಹಾಜರಾತಿ ಕಡಿಮೆ ಇತ್ತು.
ಕಾರ್ಮಿಕ ಸಂಘಟನೆಗಳ ಬಂದ್ ಕರೆ ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿದ್ದರಿಂದ ನಿನ್ನೆಯಿಂದಲೇ ಅಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನಾ ಕರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 20 ಕೋಟಿ ಕಾರ್ಮಿಕರು ಭಾಗಿಯಾಗಿದ್ದಾರೆ. ಸಾರಿಗೆ ನೌಕರರೊಂದಿಗೆ ರೈಲ್ವೆ ನೌಕರರು ಬಂದ್ಗೆ ಬೆಂಬಲ ಸೂಚಿಸಿದ್ದಾರೆ. ಈ ನೌಕರರು ಪ್ರತಿಭಟನೆಯಲ್ಲಿ ಕಪ್ಪು ಬ್ಯಾಡ್ಜ್ಗಳನ್ನು ಧರಿಸಿ ಕರ್ತವ್ಯ ನಿರ್ವಹಿಸಿದ್ದ ದೃಶ್ಯ ಕಂಡುಬಂದಿತು.
ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ಮತ್ತಿತರ ಕಚೇರಿಗಳು ಭಾಗಶ: ಕಾರ್ಯನಿರ್ವಹಿಸಿದವು.
ಹಲವೆಡೆ ಬಸ್ಗಳಿಗೆ ಕಲ್ಲು ತೂರಾಟ: ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಬರಾಸತ್ ಮತ್ತು ಪಶ್ಚಿಮ್ ಬರ್ದಮಾನ್ ಜಿಲ್ಲೆಗಳಲ್ಲಿ ದುಷ್ಕರ್ಮಿಗಳು ಕೆಲವು ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳು ವರದಿಯಾಗಿವೆ. ಇತರ ರಾಜ್ಯಗಳಲ್ಲೂ ಕೆಲವು ಅಹಿತಕರ ಘಟನೆಗಳು ನಡೆದ ವರದಿಯಾಗಿವೆ. ಪ್ರತಿಭಟನಾಕಾರರ ಗುಂಪು ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದ ದೃಶ್ಯಗಳು ಬೆಳಗ್ಗೆ ಕಂಡುಬಂದವು.
ಕೇಂದ್ರ ಸರ್ಕಾರದ ಮಸೂದೆಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದïಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂದ್ ವಿರುದ್ಧ ಕಿಡಿ ಕಾರಿದ್ದಾರೆ.
ಬಂದ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, ಬಂದ್ ವಿಷಯವಾಗಿ ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಪಶ್ಚಿಮ ಬಂಗಾಳದಲ್ಲಿ ನಮ್ಮ ಸರ್ಕಾರ ಬಂದ್ಗೆ ಬೆಂಬಲಿಸದೇ ಇರಲು ತೀರ್ಮಾನಿಸಿದೆ, ಕಳೆದ 34 ವರ್ಷಗಳಿಂದ ರಾಜ್ಯದಲ್ಲಿ ಎಡಪಕ್ಷಗಳು ಬಂದ್ಗೆ ಕರೆ ನೀಡಿ ರಾಜ್ಯವನ್ನು ಹಾಳುಮಾಡಿವೆ. ಇನ್ನು ಸಾಕು ಯಾವುದೇ ಬೆಂದ್ ಗೆ ಬೆಂಬಲ ನೀಡುವುದಿಲ್ಲ ಯಾವುದೇ ಬಂದ್ ಇರುವುದಿಲ್ಲ ಎಂದು ಮಾಧ್ಯಮಗಳಿಗೆ ಮಮತಾ ಬ್ಯಾನರ್ಜಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕಾರ್ಮಿಕ ಸಂಘಟನೆಗಳ ಬೇಡಿಕೆಗಳೇನು?
ಮೋಟಾರು ವಾಹನ ತಿದ್ದುಪಡಿ ಮಸೂದೆ, ಕಾರ್ಮಿಕ ಕಾನೂನು ತಿದ್ದುಪಡಿ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಇಂದಿನಿಂದ ಎರಡು ದಿನ ಭಾರತ್ ಬಂದ್ ನಡೆಸುತ್ತಿವೆ.
ಕೇಂದ್ರ ಸರ್ಕಾರದ ಪ್ರಸ್ತಾವಿತ ಕಾನೂನು ತಿದ್ದುಪಡಿಯನ್ನು ವಿರೋಧಿಸುವುದರ ಜೊತೆಗೆ ಹಲವು ಬೇಡಿಕೆಗಳನ್ನೂ ಮುಂದಿಟ್ಟಿವೆ. 2018ರ ಸೆಪ್ಟೆಂಬರ್ನಲ್ಲಿ ನಡೆದಿದ್ದ ಕಾರ್ಮಿಕ ಸಂಘಟನೆಗಳ ಸಮಾವೇಶದಲ್ಲಿ ತಮ್ಮ 12 ಬೇಡಿಕೆಗಳನ್ನೂ ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು
ಕಾರ್ಮಿಕ ಸಂಘಟನೆಗಳ ಕನಿಷ್ಟ ವೇತನ ಬೇಡಿಕೆಯ ನಿರ್ಲಕ್ಷ್ಯ, ಸಾರ್ವತ್ರಿಕ ಸಾಮಾಜಿಕ ಭದ್ರತೆ, ಆರ್ಥಿಕ ಕ್ಷೇತ್ರವೂ ಸೇರಿದಂತೆ ಸಾರ್ವಜನಿಕ ಹಾಗೂ ಸರ್ಕಾರಿ ಸೆಕ್ಟರ್ಗಳನ್ನು ಖಾಸಗೀಕರಣಗೊಳಿಸಬಾರದು. ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಈಡೇರಿಲ್ಲ. ಬೇಡಿಕೆಗಳಿಗೆ ಸಂಬಂಧಿಸಿದಂತೆ ಮಾತುಕತೆಗೆ ಮುಂದಾಗದ ಕೇಂದ್ರ ಸರ್ಕಾರ ಇವೆಲ್ಲದರ ಜತೆಗೆ ಕಾರ್ಮಿಕ ಸಂಘಟನೆಗಳು ದೇಶದಲ್ಲಿ ನಡೆಯುತ್ತಿರುವ ಕೋಮು ವಿಭಜನೆ ತಂತ್ರಗಳ ವಿರುದ್ಧದ ನಿರ್ಣಯವನ್ನೂ ಕೈಗೊಂಡಿದ್ದವು.