ಬೆಂಗಳೂರು,ಜ.8- ಕೃಷಿ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ವಿಫುಲ ಅವಕಾಶವಿದ್ದು, ಖಾಸಗಿ ಸಂಸ್ಥೆಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ್ರೆಡ್ಡಿ ತಿಳಿಸಿದರು.
ಕೃಷಿ ಇಲಾಖೆ ಹಾಗೂ ಜಲಾನಯನ ಅಭಿವೃದ್ದಿ ಇಲಾಖೆ ವಿಕಾಸಸೌಧದಲ್ಲಿಂದು ಆಯೋಜಿಸಿದ್ದ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರಕೃಷಿ ಅಭಿವೃದ್ದಿ ಯೋಜನೆಯ ಅನುಷ್ಠಾನದ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಖಾಸಗಿ ಸಹಭಾಗಿತ್ವದಲ್ಲಿ ಕೃಷಿ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ಹೆಚ್ಚಿನ ಅವಕಾಶಗಳಿವೆ. ಆದರೂ ಕಾರ್ಪೊರೇಟ್ ಕ್ಷೇತ್ರಕ್ಕೆ ಹೋಲಿಸಿದರೆ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಕಡಿಮೆ ಇದೆ ಎಂದರು.
ಕೃಷಿ ಕ್ಷೇತ್ರದ ಆಸಕ್ತಿ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ.ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಕೃಷಿಕರಲ್ಲಿ ವ್ಯವಸಾಯದ ಬಗ್ಗೆ ಆಸಕ್ತಿ ಇಳಿಮುಖವಾಗುತ್ತಿದೆ ಎಂದು ಹೇಳಿದರು.
ವೈಜ್ಞಾನಿಕ ರೀತಿಯಲ್ಲಿ ಬಂಡವಾಳ ತೊಡಗಿಸಿದ್ದೇ ಆದಲ್ಲಿ ಕಂಪನಿ ಮತ್ತು ರೈತರಿಗೆ ಅನುಕೂಲವಾಗಲಿದೆ.ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಿದೆ.ಕೃಷಿ ಕ್ಷೇತ್ರದಲ್ಲಿ ಸಮಗ್ರ ಬೆಳವಣಿಗೆ ಆಗಬೇಕು ಎಂದು ತಿಳಿಸಿದರು.
ರೈತರು ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಕೃಷಿ ಉತ್ಪನ್ನಗಳಿಗೆ ಉತ್ತಮವಾದ ಮಾರುಕಟ್ಟೆ ಒದಗಿಸಬೇಕಿದೆ.ರಾಜ್ಯ ಸರ್ಕಾರ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಕೆಗೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಅಭಿವೃದ್ದಿ ಆಯುಕ್ತರಾದ ವಂದಿತಾ ಶರ್ಮ, ಕೃಷಿ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರ್ ರಾವ್, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಪಿ.ಪಿ.ರಾಯ್, ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಪದ್ಮಯ್ಯ ನಾಯಕ್, ಕೃಷಿ ಮಾರಾಟ ಇಲಾಖೆಯ ರಾಜೇಶ್ಗೌಡ, ವಲ್ರ್ಡ್ ಎನಾಮಿಕ್ ಫೋರಮ್ನ ಸುಧೀರ್ ಗೋಯಲ್ ಮತ್ತಿತರರು ಪಾಲ್ಗೊಂಡಿದ್ದರು.