ಬೆಂಗಳೂರು, ಜ.8- ನಿಗಮ-ಮಂಡಳಿ ನೇಮಕ ವಿವಾದ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.
ಶಿರಸಿ ಮೇಲ್ಸೇತುವೆ ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಐದು ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆ ವಿವಾದ ಕುರಿತಂತೆ ನಿನ್ನೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಬರುತ್ತಿದ್ದು, ಇಂದು ಸಂಜೆ ಇಬ್ಬರೂ ಸಿಎಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.
ಸಿಎಂ ಭೇಟಿ ನಂತರ ವಿವಾದ ಬಗೆಹರಿಯಲಿದ್ದು, ಖಾಲಿ ಇರುವ ಐದು ಸ್ಥಾನಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಸಿರ್ಸಿ ಮೇಲ್ಸೇತುವೆ ರಸ್ತೆಯಲ್ಲಿ ಗುಂಡಿ ಬಿದ್ದ ಹಿನ್ನೆಲೆಯಲ್ಲಿ 4 ಕೋಟಿ ರೂ.ವೆಚ್ಚದಲ್ಲಿ ಆಧುನಿಕ ಟೆಕ್ನಾಲಜಿ ಬಳಸಿ ದುರಸ್ತಿ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಿರ್ಸಿ ವೃತ್ತದ ಎರಡೂವರೆ ಕಿಲೋ ಮೀಟರ್ ಉದ್ದದ ಒಂದು ಭಾಗದಲ್ಲಿ ಮಿನರಲ್ ಆಧಾರಿತ ಆಸ್ ಫಾಲ್ಟಿಕೋ ಸೀಲ್ನ ಶೀಟ್ ಹಾಕಲಾಗುತ್ತಿದೆ.ಈ ತಂತ್ರಜ್ಞಾನದಿಂದ ಮೇಲ್ಸೇತುವೆ ಮೇಲೆ ರಸ್ತೆ ಗುಂಡಿ ಬೀಳುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದರು.
ರಸ್ತೆಯ ಒಂದು ಭಾಗದಲ್ಲಿ ಆರಂಭಿಸಿರುವ ಕಾಮಗಾರಿಯನ್ನು 30 ದಿನಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ ಎಂದು ಹೇಳಿದರು.
ಈ ರೀತಿಯ ತಂತ್ರಜ್ಞಾನ ಮೇಲ್ಸೇತುವೆ ರಸ್ತೆಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಬಹುದಾಗಿದೆ.ಇತರೆಡೆ ವೈಟ್ ಟಾಪಿಂಗ್ ಹಾಗೂ ಟೆಂಡರ್ಶ್ಯೂರ್ ಯೋಜನೆಯಡಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಎಲ್ಲರೂ ವಿರೋಧಿಸಲೇಬೇಕು. ಆದರೆ, ರಾಜ್ಯದಲ್ಲಿ ಬಂದ್ನಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸಚಿವ ಪುಟ್ಟರಂಗಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಚಿವರೇ ಸೂಚನೆ ನೀಡಿದ್ದಾರೆ ಎಂದು ಪರಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆಂಗ್ಲ ಮಾಧ್ಯಮ ಶಾಲೆಗೆ ಬದ್ಧ: ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಲು ನಮ್ಮ ಸರ್ಕಾರ ಬದ್ಧವಿದೆ. ಕನ್ನಡ ನಮ್ಮ ಮಾತೃಭಾಷೆ. ಅದನ್ನು ಎಂದಿಗೂ ಕಡೆಗಣಿಸಲು ಸಾಧ್ಯವಿಲ್ಲ. ಕನ್ನಡ ಕಲಿಯುವ ಮಕ್ಕಳಿಗೆ ಇಂಗ್ಲಿಷ್ ಜ್ಞಾನ ಅತ್ಯಗತ್ಯ. ಹೀಗಾಗಿ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಮತ್ತಿತರ ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.