ಆಸಿಸ್ ನಾಡಲ್ಲಿ ಟೀಂ ಇಂಡಿಯಾಕ್ಕೆ ಐತಿಹಾಸಿಕ ಟೆಸ್ಟ್ ಸರಣಿ

ಸಿಡ್ನಿ: ಆಸಿಸ್ ನಾಡಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಐತಿಹಾಸಿಕ ಸರಣಿ ಗೆಲುವು ದಾಖಲಿಸಿದೆ. ಇದರೊಂದಿಗೆ 72 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾಂಗರೂ ನಾಡಲ್ಲಿ ಚೊಚ್ಚಲ ಟೆಸ್ಟ್ ಸರಣಿಗೆ ಮುತ್ತಿಕ್ಕಿದೆ.
ಸೋಮವಾರ ಐದನೆ ದಿನದಾಟದ ಪಂದ್ಯ ಮಳೆಯ ಕಾರಣ ರದ್ದಾಗಿದ್ದರಿಂದ ಸಿಡ್ನಿ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡಿತು. ಕಳೆದ ಏಳು ದಶಕಗಳಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಆತಿಥೇಯರ ವಿರುದ್ಧ ಆಡುತ್ತಲ್ಲೇ ಬಂದಿತ್ತು.
ತಂಡದ ಮಾಜಿ ಶ್ರೇಷ್ಠ ನಾಯಕರುಗಳಾದ ಕಪಿಲ್‍ದೇವ್, ಸುನಿಲ್ ಗವಾಸ್ಕಾರ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ ಮತ್ತು ಧೊನಿಯಂತ ನಾಯಕರುಗಳು ಆಸಿಸ್ ನೆಲ್ಲದಲ್ಲಿ ತಂಡವನ್ನ ಮುನ್ನಡೆಸಿದ್ದರು. ಆದರೆ ಈ ಯಾವ ನಾಯಕರುಗಳು ಆಸಿಸ್ ನೆಲದಲ್ಲಿ ಸರಣಿ ಗೆದ್ದಿರಲಿಲ್ಲ.
ಆದರೆ ಈಗ ಕ್ಯಾಪ್ಟನ್ ಕೊಹ್ಲಿ ಇವರ್ಯಾರು ಮಾಡದ ಸಾಧನೆಯನ್ನ ಮಾಡಿ ಕಾಂಗರೂ ನಾಡಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಕೊಟ್ಟ ತಂಡದ ಮೊದಲ ನಾಯಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಗೆಲುವಿನ ಸಂತಸ ಹಂಚಿಕೊಂಡಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಾನು ತಂಡದ ಒಂದು ಭಾಗ ಅಗಿರೋದಕ್ಕೆ ಹೆಮ್ಮೆ ಅನಿಸುತ್ತದೆ. ನಮ್ಮ ಹುಡುಗರು ಖುಷಿಯಿಂದ ಇರುವಂತೆ ಮಾಡಿದ್ದಾರೆ. ಈ ಸರಣಿ ಗೆಲುವು ದೊಡ್ಡ ಮೈಲುಗಲ್ಲು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಗೆಲ್ಲೋದು ಎಷ್ಟು ಕಷ್ಟ ಅನ್ನೋದು ಗೊತ್ತು. ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಅವರಿಗೆ ಅಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಹೇಳಿದ್ದಾರೆ.
ಆಸಿಸ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಕ್ಕೆ ಅಭಿನಂದನೆಗಳ ಮಹಾ ಪೂರವೇ ಹರಿದು ಬಂದಿದ್ದು ಬಿಸಿಸಿಐ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮಾಜಿ ನಾಯಕ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್,ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಸೇರದಿದಂತೆ ಕ್ರಿಕೆಟ್ ದಿಗ್ಗಜರು ಅಭಿನಂದನೆಗಳನ್ನ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ