ಸಿಡ್ನಿ, ಜ.7- ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗುವುದರೊಂದಿಗೆ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಇದಕ್ಕಾಗಿ 71 ವರ್ಷಗಳ ಕಾಯುವಿಕೆ ಅಂತ್ಯಗೊಂಡಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಭಾರತ ಸುವರ್ಣ ಅಧ್ಯಾಯ ಬರೆದಿದೆ. ಇದು ವಿರಾಟ್‍ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಲಭಿಸಿದ ಅಮೋಘ ಗೆಲುವು.
ಮಳೆ ಹಾಗೂ ಮಂದ ಬೆಳಕಿನ ಅಡಚಣೆಯ ನಡುವೆ ಆತಿಥೇಯ ಆಸ್ಟ್ರೆಲಿಯಾ ತಂಡಕ್ಕೆ ತವರು ನೆಲದಲ್ಲಿಯೆ 31 ವರ್ಷಗಳ ಬಳಿಕ ಫಾಲೊ ಆನ್ ಹೇರಿದ್ದ ಭಾರತ ತಂಡ ಆಸಿಸ್ ನೆಲದಲ್ಲಿ ಸರಣಿ ಜಯದ ಮೂಲಕ ಭರ್ಜರಿ ಜಯ ಸಾಧಿಸಿದೆ.
ಈ ಹಿಂದೆ ಅಡಿಲೇಡ್ ಮತ್ತು ಮೆಲ್ಬೋರ್ನ್ ಟೆಸ್ಟ್ ಪಂದ್ಯಗಳನ್ನು ಗೆದ್ದು ಸರಣಿ ಮೇಲೆ ಬಿಗಿ ಹಿಡಿತ ಸಾಧಿಸಿದ್ದ ಕೊಹ್ಲಿ ಪಡೆ ಅಂತಿಮ ಪಂದ್ಯದಲ್ಲಿ ಡ್ರಾ ಆಗುವುದರೊಂದಿಗೆ ಸರಣಿಯನ್ನು 2-1ರಲ್ಲಿ ತನ್ನ ಕೈ ವಶ ಮಾಡಿಕೊಂಡು ಹೊಸ ಇತಿಹಾಸ ನಿರ್ಮಿಸಿದೆ.
ಎಸ್‍ಸಿಜಿ ಕ್ರೀಡಾಂಗಣದಲ್ಲಿ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಮಳೆಯ ಕಾಟಕ್ಕೆ ಬಲಿಯಾಗಿ ನೀರಸ ಡ್ರಾದಲ್ಲಿ ಅಂತ್ಯವಾಗಿದೆ. ಪಂದ್ಯದ ನಾಲ್ಕನೇ ದಿನದಿಂದ ಆರಂಭವಾದ ಮಳೆ ಐದನೇ ದಿನವೂ ಮುಂದುವರೆದಿತ್ತು. ಈ ಹಿನ್ನಲೆಯಲ್ಲಿ ಭೋಜನ ವಿರಾಮದ ಬಳಿಕ ಪರಿಶೀಲಿಸಿದ ಅಂಪೈರ್‍ಗಳು ಪಂದ್ಯವನ್ನು ಡ್ರಾ ಎಂದು ಘೋಷಣೆ ಮಾಡಿದರು. ಐದನೆ ದಿನದಾಟವು ಒಂದೇ ಒಂದು ಎಸೆತವೂ ಇಲ್ಲದೆ ಅಂತ್ಯಕೊಂಡಿತು.
71 ವರ್ಷಗಳ ಮಹಾ ನಿರೀಕ್ಷೆ ಅಂತ್ಯ:
ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಕ್ರಿಕೆಟ್ ಸರಣಿಗಾಗಿ ಮೊದಲ ವಿದೇಶ ಪ್ರವಾಸ ಮಾಡಿದ್ದು, ಆಸ್ಟ್ರೇಲಿಯಾಕ್ಕೆ 1947-48ರಿಂದ ಆರಂಭವಾಗಿ 2014-15ರವರೆಗೆ 11 ಬಾರಿ ಪೂರ್ಣಪ್ರಮಾಣದ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ, 2 ಬಾರಿ ಸರಣಿ ಸಮಬಲ ಸಾಧಿಸಿದ್ದೆ ಶ್ರೆಷ್ಠ ಸಾಧನೆಯಾಗಿತ್ತು. ಆದರೆ , ಈಗ ತನ್ನ 12ನೇ ಪ್ರವಾಸದಲ್ಲಿ ಕೊನೆಗೂ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಸರಣಿ ಗೆಲುವಿನ ಇತಿಹಾಸ ಬರೆದಿದೆ. ಭಾರತದ 71 ವರ್ಷಗಳ ಕಾಯುವಿಕೆ ಅಂತ್ಯವಾಗಿದೆ.
31 ವರ್ಷಗಳ ಆಸೀಸ್ ಪ್ರಾಬಲ್ಯಕ್ಕೆ ಕಡಿವಾಣ:
ಟೆಸ್ಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಅದರದ್ದೆ ನೆಲದಲ್ಲಿ ಪ್ರವಾಸಿ ತಂಡವೊಂದು ಕೊನೇ ಬಾರಿ ಫಾಲೊ ಆನ್ ಹೇರಿದ್ದು 1988ರಲ್ಲಿ. 31 ವರ್ಷಗಳ ನಂತರ ಆ ಸಾಧನೆಯನ್ನು ಭಾರತ ತಂಡ ಮಾಡಿತು. ತವರಿನಲ್ಲಿ ಕಳೆದ ಸತತ 172 ಪಂದ್ಯಗಳಿಂದ ಯಾವುದೇ ಎದುರಾಳಿ ತಂಡದಿಂದ ಫಾಲೊ ಆನ್ ಎದುರಿಸದೆ ಪ್ರಾಬಲ್ಯ ಮೆರೆದಿದ್ದ ಆಸೀಸ್, ಸಿಡ್ನಿಯಲ್ಲಿ ಕೊನೆಗೂ ಫಾಲೊಆನ್ ಬಲೆಗೆ ಬಿತ್ತು.
ಭಾನುವಾರ 6 ವಿಕೆಟ್‍ಗೆ 236 ರನ್‍ಗಳಿಂದ 4ನೇ ದಿನದಾಟ ಮುಂದುವರಿಸಿದ ಆಸೀಸ್, ಸ್ಪಿನ್ನರ್ ಕುಲದೀಪ್ ಯಾದವ್‍ಗೆ 5 ವಿಕೆಟ್ ಗೊಂಚಲು ಒಪ್ಪಿಸಿ 300 ರನ್‍ಗೆ ಮೊದಲ ಇನಿಂಗ್ಸ್ ಮುಗಿಸಿತು. ಇದರಿಂದ 322 ರನ್‍ಗಳ ಬೃಹತ್ ಮುನ್ನಡೆ ಪಡೆದ ವಿರಾಟ್‍ಕೊಹ್ಲಿ ಪಡೆ, ಆಸೀಸ್ ತಂಡಕ್ಕೆ ಫಾಲೊ ಆನ್‍ಹೇರಿ ಮತ್ತೆ ಬ್ಯಾಟಿಂಗ್ ಆಹ್ವಾನಿಸಿತು.
ದ್ವಿತೀಯ ಸರದಿಯಲ್ಲಿ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದ್ದಾಗ ಮತ್ತೆ ಮೊಡ ಹಾಗೂ ಮಂದ ಬೆಳಕು ಅಡ್ಡಿಯಾಗಿದ್ದರಿಂದ ದಿನದಾಟ ಬೇಗನೆ ಸ್ಥಗಿತಗೊಂಡಿತ್ತು.
1988ರಲ್ಲಿ ಆಸೀಸ್ ಕೊನೇ ಬಾರಿ ಇಂಗ್ಲೆಂಡ್ ತಂಡದಿಂದ ಫಾಲೊ ಆನ್ ಎದುರಿಸಿತ್ತು. ಇನ್ನು ಭಾರತ ಕೂಡ ಆಸ್ಟ್ರೇಲಿಯಾ ನೆಲದಲ್ಲಿ 33 ವರ್ಷಗಳ ಬಳಿಕ ಫಾಲೊ ಆನ್ ಹೇರಿತು. 1986ರಲ್ಲಿ ಸಿಡ್ನಿಯಲ್ಲೆ ದಿಗ್ಗಜ ಕಪಿಲ್ ದೇವ್ ಸಾರಥ್ಯದಲ್ಲಿ ಫಾಲೊ ಆನ್ ಹೇರಿತ್ತು. ಒಟ್ಟಾರೆ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡ ಆಸೀಸ್‍ಗೆ 4ನೇ ಬಾರಿ ಫಾಲೊ ಆನ್ ವಿಧಿಸಿತ್ತು. ಆಸೀಸ್‍ನಲ್ಲಿ 2 ಸಲ ಹಾಗೂ 1979-80ರಲ್ಲಿ ದೆಹಲಿ ಮತ್ತು ಮುಂಬೈಯಲ್ಲಿ ತಲಾ ಒಮ್ಮೆ ಫಾಲೊ ಆನ್ ಹೇರಿತ್ತು.
ಮಳೆಗೆ ಆಹುತಿಯಾದ ಪಂದ್ಯ:
ಸಿಡ್ನಿ ಕ್ರೀಡಾಂಗಣದಲ್ಲಿ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಮಳೆಯ ಕಾಟಕ್ಕೆ ಬಲಿಯಾಗಿ ನೀರಸ ಡ್ರಾದಲ್ಲಿ ಅಂತ್ಯವಾಗಿದೆ. ಪಂದ್ಯದ ನಾಲ್ಕನೇ ದಿನದಿಂದ ಆರಂಭವಾದ ಮಳೆ ಐದನೇ ದಿನವೂ ಮುಂದುವರೆದಿತ್ತು. ಈ ಹಿನ್ನಲೆಯಲ್ಲಿ ಇಂದು ಭೋಜನ ವಿರಾಮದ ಬಳಿಕ ಪರಿಶೀಲಿಸಿದ ಅಂಪೈರ್ ಗಳು ಪಂದ್ಯವನ್ನು ಡ್ರಾ ಎಂದು ಘೋಷಣೆ ಮಾಡಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಪೂಜಾರ ಮತ್ತು ರಿಷಬ್ ಪಂತ್ ಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 622 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 300 ರನ್ ಗಳಿಗೆ ಆಲೌಟ್ ಆಗಿತ್ತು. ಅಲ್ಲದೆ 322 ರನ್‍ಗಳ ತೀವ್ರ ಹಿನ್ನಡೆ ಅನುಭವಿಸಿತು. ಅಲ್ಲದೆ ಗಾಯದ ಮೇಲೆ ಬರೆ ಎಂಬಂತೆ ಭಾರತ ತಂಡ ಆಸಿಸ್‍ಮೇಲೆ ಫಾಲೋ ಆನ್ ಹೇರಿತು. 322 ರನ್‍ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ನಾಲ್ಕನೇ ದಿನದಾಟದಲ್ಲಿ 6 ರನ್‍ಗಳಿಸಿತ್ತು. ಬಳಿಕ ಆರಂಭವಾದ ಮಳೆರಾಯನ ಆರ್ಭಟ 4 ಮತ್ತು 5ನೇ ದಿನದಾಟವನ್ನು ಸಂಪೂರ್ಣವಾಗಿ ಹೀಗಾಗಿ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದ್ದರೂ ಭಾರತ ಸರಣಿ ಗೆದ್ದು 71 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿದ್ದು, ಅವಿಸ್ಮರಣೀಯ ಸಂಗತಿ.