ಬೆಂಗಳೂರು,ಜ.7- ನಿಗಮಮಂಡಳಿಗಳಿಗೆ ನೇಮಕಾತಿ ಮಾಡಲು ಶಿಫಾರಸು ಮಾಡಿದ್ದ ಕೆಲವು ಹೆಸರುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ತಡೆಹಿಡಿಯಲಾಗಿದೆಯೇ ಹೊರತು ಯಾವ ಹೆಸರನ್ನು ಮುಖ್ಯಮಂತ್ರಿಗಳು ತಿರಸ್ಕರಿಸಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿಗಳಿಗೆ ಶಿಫಾರಸು ಮಾಡಿದ್ದ ಹೆಸರುಗಳ ಪೈಕಿ ಐದು ಮಂದಿಗೆ ಅಂಗೀಕಾರ ಸಿಕ್ಕಿಲ್ಲ. ಹಾಗೆಂದು ಅವರನ್ನು ತಿರಸ್ಕರಿಸಿರುವುದಾಗಿಯೂ ಸಿಎಂ ಹೇಳಿಲ್ಲ. ಹೆಚ್ಚಿನ ಮಾಹಿತಿ ಅಗತ್ಯವಿದೆ. ಕೆಲವು ಸ್ಪಷ್ಟನೆಗಳು ಬೇಕು ಎಂಬ ಕಾರಣಕ್ಕಾಗಿ ತಡೆಹಿಡಿದಿದ್ದಾರೆ .ನಾನು ಈ ಬಗ್ಗೆ ಇನ್ನೂ ಸಿಎಂ ಬಳಿ ಮಾತುಕತೆ ನಡೆಸಿಲ್ಲ. ಕುಳಿತು ಚರ್ಚೆ ಮಾಡುತ್ತೇವೆ. ಕಾಂಗ್ರೆಸ್ ಕಳುಹಿಸಿದ್ದ ಪಟ್ಟಿಗೆ ಸಹಿ ಹಾಕುವಂತೆ ನಾನು ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದೇನೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರನ್ನು ನಿಗಮ ಮಂಡಳಿಗಳಿಗೆ ನೇಮಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ ಎಲ್ಲರೂ ಕುಳಿತು ಚರ್ಚೆ ಮಾಡಿ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಐದು ಮಂದಿ ಶಾಸಕರ ನೇಮಕಾತಿಗೆ ಅಂಗೀಕಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅದನ್ನು ರಾಹುಲ್ಗಾಂಧಿ ಅವರಿಗೆ ಆದ ಅವಮಾನ ಎಂದು ಭಾವಿಸಬೇಕಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಎಸ್.ಟಿ.ಸೋಮಶೇಖರ್ ಅವರಿಗೆ ಬಿಡಿಎ ಅಧ್ಯಕ್ಷ ಸ್ಥಾನ ನೀಡಲು ನಾನು ವಿರೋಧ ವ್ಯಕ್ತಪಡಿಸಿದ್ದೇ ಎಂಬುದು ಸುಳ್ಳು ಮಾಹಿತಿ. ಎಲ್ಲರೂ ಕುಳಿತು ಚರ್ಚೆ ಮಾಡಿಯೇ ನಿರ್ಧಾರ ತೆಗೆದುಕೊಂಡಿದ್ದೇವೆ. ಇದರಲ್ಲಿ ಯಾವ ವಿರೋಧವೂ ಇಲ್ಲ. ಸೋಮಶೇಖರ್ ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ಯಾರೂ ರಾಜೀನಾಮೆ ನೀಡುವ ಅಗತ್ಯವಿಲ್ಲ. ಈ ಬಗ್ಗೆ ಕುಳಿತು ಚರ್ಚೆ ಮಾಡಿ ಎಲ್ಲವನ್ನೂ ಬಗೆಹರಿಸುತ್ತೇವೆ ಎಂದು ಅವರು ಹೇಳಿದರು.
ಇಂದು ಕೆಲವು ಶಾಸಕರು ತಮ್ಮನ್ನು ಭೇಟಿ ಮಾಡಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.ಅನಂತರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ಪರಮೇಶ್ವರ್ ತಿಳಿಸಿದರು.
ಬಂದ್ಗೆ ಮುಂಜಾಗ್ರತೆ:
ನಾಳೆಯಿಂದ ಎರಡು ದಿನಗಳ ಕಾಲ ನಡೆಯುವ ಭಾರತ್ ಬಂದ್ ವೇಳೆ ಸಾರ್ವಜನಿಕರ ಆಸ್ತಿಪಾಸ್ತಿಗೆ ದಕ್ಕೆಯಾಗದಂತೆ ರಕ್ಷಣೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಭಾರತ್ ಬಂದ್ನಿಂದ ಸಾರಿಗೆ ಸೌಲಭ್ಯ ಹದಗೆಡುವ ಬಗ್ಗೆಯೂ ಸರ್ಕಾರದ ಗಮನದಲ್ಲಿದೆ.ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಪರ್ಯಾಯ ಸಾರಿಗೆ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.