ಉತ್ತರ ಭಾರತದಲ್ಲಿ ಶೀತಗಾಳಿ ಹೆಚ್ಚಾದ ಹಿನ್ನಲೆ, ರಾಜ್ಯದಲ್ಲೂ ಜಾಸ್ತಿಯಾದ ಚಳಿಯ ಪ್ರಮಾಣ

ಬೆಂಗಳೂರು,ಜ.5-ಉತ್ತರ ಭಾರತದಲ್ಲಿ ಶೀತಗಾಳಿ ಹೆಚ್ಚಾಗಿರುವ ಪರಿಣಾಮ ರಾಜ್ಯದಲ್ಲೂ ಚಳಿಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್‍ನಷ್ಟು ಕಡಿಮೆ ದಾಖಲಾಗುತ್ತಿದ್ದು, ಇನ್ನೂ ಒಂದು ವಾರದ ಕಾಲ ಇದೇ ರೀತಿ ಮೈ ಕೊರೆಯುವ ಚಳಿ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಮಹಾರಾಷ್ಟ್ರ ಭಾಗದಲ್ಲೂ ಶೀತಗಾಳಿ ಕಂಡು ಬರುವ ಮುನ್ಸೂಚನೆಯಿದ್ದು ನಾಳೆಯಿಂದ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ಗಂಟೆಗಳ ಕಾಲ ಚಳಿಯ ಪ್ರಮಾಣ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕನಿಷ್ಠ ತಾಪಮಾನ ಇಳಿಕೆಯಾಗಿರುವುದು ಕಂಡು ಬಂದಿದೆ.ಬೆಂಗಳೂರಿನಲ್ಲಿ 2012ರಲ್ಲಿ 12.1 ಡಿಗ್ರಿ ಸೆಲ್ಸಿಯಸ್‍ನಷ್ಟು ಕನಿಷ್ಠ ತಾಪಮಾನ ದಾಖಲಾಗಿತ್ತು.ಆದರೆ ಜ.2ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11.1 ಡಿಗ್ರಿ ಸೆಲ್ಸಿಯಸ್‍ಗೆ ಕನಿಷ್ಠ ತಾಪಮಾನ ಇಳಿಕೆಯಾಗಿತ್ತು.ಈ ವರ್ಷದ ಆರಂಭದಿಂದಲೂ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಸಂಕ್ರಾಂತಿ ಹಬ್ಬದವರೆಗೂ ಇದೇ ರೀತಿ ಚಳಿ ಮುಂದುವೆರಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಕರಾವಳಿ ಭಾಗದ ಜಿಲ್ಲೆಗಳನ್ನು ಹೊರತು ಪಡಿಸಿದರೆ ರಾಜ್ಯದ ಬಹುತೇಕ ಜಿಲ್ಲೆಗಳ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‍ಗಿಂತ ದಾಖಲಾಗುತ್ತಿದೆ. ಸರಾಸರಿ 10ರಿಂದ 12 ಡಿಗ್ರಿ ಸೆಲ್ಸಿಯಸ್ ನಡುವೆಯೇ ಕನಿಷ್ಠ ತಾಪಮಾನ ದಾಖಲಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ