ಬೆಂಗಳೂರು,ಜ.5- ಬಿಬಿಎಂಪಿ ತನ್ನ ಬೇಜವಾಬ್ದಾರಿತನ, ಕರ್ತವ್ಯ ಲೋಪ, ನಿಯಮಗಳ ಉಲ್ಲಂಘನೆ, ಅಭಿವೃದ್ಧಿ ಶೂನ್ಯತೆಯಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಲೇ ಇದೆ.
ಈಚೆಗೆ ಹೈಕೋರ್ಟ್ ಫ್ಲೆಕ್ಸ್ ತೆರವು, ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಹಲವು ವಿಚಾರ ಬಗ್ಗೆ ತರಾಟೆಗೆ ತೆಗೆದುಕೊಂಡ ಮೇಲಷ್ಟೇ ಬಿಬಿಎಂಪಿ ತಡಬಡಿಸಿ ಎದ್ದು ಕುಂತಿದೆ.
ಬಿಬಿಎಂಪಿ ಹೈಕೋರ್ಟ್ ಚಾಟಿ ಬೀಸದ ಹೊರತು ಎಚ್ಚೆತ್ತುಕೊಳ್ಳುವುದಿಲ್ಲ ಎಂಬುದನ್ನು ಹಲವು ಬಾರಿ ನಿರೂಪಿಸುತ್ತಲೇ ಬರುತ್ತಿದೆ.ಇದೀಗ ಅಂತಹುದೇ ಒಂದು ಘಟನೆ ನಡೆದಿದ್ದು, ಹೈಕೋರ್ಟ್ ಛೀಮಾರಿಗೊಳಗಾಗಿ ಕರ್ತವ್ಯದತ್ತ ಮುಖಮಾಡಿದೆ.
ನಿಯಮದಂತೆ ಪ್ರತಿ ತಿಂಗಳು ಕಡ್ಡಾಯವಾಗಿ ಪ್ರತಿ ವಾರ್ಡ್ನಲ್ಲೂ ವಾರ್ಡ್ ಸಮಿತಿ ಸಭೆ ನಡೆಯಬೇಕು.ಇಲ್ಲವಾದರೆ ಕೇಂದ್ರ ಅನುದಾನ ಖೋತಾ ಆಗುವುದರಲ್ಲಿ ಸಂದೇಹವಿಲ್ಲ. ಹೀಗಿದ್ದರೂ ಬಿಬಿಎಂಪಿಯ ಯಾವ ಸದಸ್ಯರೂ ವಾರ್ಡ್ ಸಮಿತಿ ಸಭೆ ನಡೆಸದೆ ನಿರ್ಲಕ್ಷ್ಯ ತೋರಿದ್ದರು.ಕೆಲವರು ಕಾಟಾಚಾರಕ್ಕೆ ನಡೆಸಿ ಸುಮ್ಮನಾಗುತ್ತಿದ್ದರು.
ಬಿಬಿಎಂಪಿ ಸದಸ್ಯರ ಈ ಮೈ ಮರೆವಿನ ಬಗ್ಗೆ ಲಂಚ ಮುಕ್ತ ಕರ್ನಾಟಕ ಸಂಘಟನೆ ಹೈ ಕೋರ್ಟ್ ಮೊರೆ ಹೋಗಿತ್ತು.ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಬಿಬಿಎಂಪಿಗೆ ಛೀ ಮಾರಿ ಹಾಕಿತು.
ಅಷ್ಟೇ ಅಲ್ಲದೇ, ಪ್ರತಿ ತಿಂಗಳ ಮೊದಲ ಶನಿವಾರ ಕಡ್ಡಾಯವಾಗಿ ವಾರ್ಡ್ ಸಮಿತಿ ಸಭೆ ನಡೆಸುವಂತೆ ಆದೇಶಿಸಿತು.
ಹೈಕೋರ್ಟ್ ಆದೇಶದ ನಂತರವೂ ಬಿಬಿಎಂಪಿ ಸದಸ್ಯರು ವಾರ್ಡ್ ಸಮಿತಿ ಸಭೆ ನಡೆಸದೇ ಉದಾಸೀನತೆ ತೋರಿದ್ದು ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗುವಂತಾಯಿತು.
ತದ ನಂತರ ಹೈಕೋರ್ಟ್ನ ಕಠಿಣ ಎಚ್ಚರಿಕೆಯಿಂದಾಗಿ ಎಚ್ಚೆತ್ತ ಬಿಬಿಎಂಪಿಯ ಬಹುತೇಕ ಸದಸ್ಯರು ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಹೊಸ ವರುಷದ ಮೊದಲ ಶನಿವಾರವಾದ ಇಂದು ತಮ್ಮ ತಮ್ಮ ವಾರ್ಡ್ಗಳಲ್ಲಿ ವಾರ್ಡ್ ಸಮಿತಿ ಸಭೆ ನಡೆಸಿದರು.
ಜಯನಗರದಲ್ಲಿ ಮೇಯರ್ ಗಂಗಾಂಬಿಕೆ, ನಾಗಪುರದಲ್ಲಿ ಉಪ ಮೇಯರ್ ಭದ್ರೇಗೌಡ, ಶಂಕರಪುರಂನಲ್ಲಿ ಆಡಳಿತ ಪಕ್ಷದ ನಾಯಕ ಶಿವರಾಜು, ಹೇರೋಹಳ್ಳಿಯಲ್ಲಿ ರಾಜಣ್ಣ.. ಹೀಗೆ ಬಹುತೇಕ ಸದಸ್ಯರು ತಮ್ಮ ವಾರ್ಡ್ಗಳಲ್ಲಿ ಸಮಿತಿ ಸಭೆ ನಡೆಸಿ, ತಮ್ಮ ವಾರ್ಡಗಳಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.
ಉಪ ಮೇಯರ್ ಭದ್ರೇಗೌಡರು, ನಾಗಪುರದಲ್ಲಿ ಸಭೆ ನಡೆಸಿದರು. ಆದರೆ ಈ ಸಭೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ನಿರ್ಣಯ ಕೈಗೊಳ್ಳಲಿಲ್ಲ. ಮುಂದಿನ ಸಭೆಯಲ್ಲಿ ತೋಟಗಾರಿಕೆ, ಪೆÇಲೀಸ್, ಸಂಚಾರಿ ಪೆÇಲೀಸ್, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ವಾರ್ಡ್ ಮಟ್ಟದ ಸಮಸ್ಯೆಗಳ ಕುರಿತು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಣಯ ಕೈಗೊಳ್ಳುವುದಾಗಿ ಉಪ ಮೇಯರ್ ಭದ್ರೇಗೌಡ ತಿಳಿಸಿದ್ದಾರೆ.
ಸಮಿತಿ ಪವರ್: ವಾರ್ಡ್ನಲ್ಲಿ ಯಾವುದೇ ಅಭಿವೃದ್ಧಿ ಯೋನೆಗೆ ಅನುಷ್ಠಾನಗೊಳ್ಳಬೇಕಾದರೆ ವಾರ್ಡ್ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವುದು ಕಡ್ಡಾಯ. ಆದರೆ ಈವರೆಗೆ ಯಾವ ಸದಸ್ಯರು ಈ ನಿಯಮ ಪಾಲಿಸದೇ ತಮ್ಮಷ್ಟಕ್ಕೆ ತಾವೇ ನಿರ್ಣಯ ಕೈಗೊಳ್ಳುತ್ತಿದ್ದರು.ಇನ್ನೂ ಕೆಲವರು ಕಾಟಾಚಾರಕ್ಕೆ ಸಭೆ ನಡೆಸಿ ಕೈತೊಳೆದುಕೊಳ್ಳುತ್ತಿದ್ದರು.
ಇದೀಗ ಹೈಕೋರ್ಟ್ ಚಾಟಿ ಬೀಸಿದ್ದೇ ತಡ ಎಲ್ಲರೂ ಸಮಿತಿ ಸಭೆಗೆ ಮುಂದಾಗಿದ್ದಾರೆ.