ಧಾರವಾಡ, ಜ.4-ಕನ್ನಡವೇ ಶಿಕ್ಷಣ ಮಾಧ್ಯಮ ಆಗಬೇಕು. ತಾಯಿಯ ನುಡಿಯಲ್ಲೇ ಶಿಕ್ಷಣ ನೀಡಬೇಕು, ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಪ್ರತ್ಯೇಕತೆಯ ಸೊಲ್ಲೇತ್ತಬಾರದು, ರಾಜ್ಯದ ಭಾಷೆ, ಸಂಸ್ಕøತಿ, ಪರಂಪರೆಗಳನ್ನು ಸಂರಕ್ಷಿಸುವ ಜಬಾಬ್ದಾರಿ ಸರ್ಕಾರದ್ದು, ಎಲ್ಲ ವ್ಯವಹಾರಗಳಲ್ಲೂ ಕನ್ನಡ ಭಾಷೆಗೆ ಮೊದಲ ಆದ್ಯತೆಯ ಸ್ಥಾನ ನೀಡಬೇಕು, ಒಂದರಿಂದ ಏಳನೇ ತರಗತಿವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು, ತುರ್ತಾಗಿ ಸರ್ಕಾರಿ ಶಾಲೆಗಳ ಸುಧಾರೀಕರಣ ಮಾಡಬೇಕು -ಇವು 84ನೇ ಅಖಿಲ ಭಾರತ ಕನ್ನಡ ಸಮ್ಮೇಳನಾಧ್ಯಕ್ಷ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ. ಚಂದ್ರಶೇಖರ ಕಂಬಾರ ಅವರ ಭಾಷಣದಲ್ಲಿ ಮಾರ್ದನಿಸಿರುವ ಕನ್ನಡ, ಕರುನಾಡಿನ ಹಿತರಕ್ಷಣೆ ಸೂತ್ರಗಳ ನುಡಿಸಾಲುಗಳು.
ಹಂಗಾಮಿ ಶಿಕ್ಷಕರನ್ನು ತಕ್ಷಣ ಕಾಯಂಗೊಳಿಸಬೇಕು, ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲಗಳಲ್ಲಿ ಕನ್ನಡದ ಬಳಕೆ ಮತ್ತಷ್ಟು ಹೆಚ್ಚಾಗಬೇಕು, ಹೊರ ದೇಶಗಳಲ್ಲಿ ಕನ್ನಡ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು ಮತ್ತು ಮಕ್ಕಳಿಗೆ ಯೋಗ್ಯ ಪಾಠವಾಗಬಹುದಾದ ಟಿವಿ ಜ್ಞಾನವಾಹಿನಿಗಳನ್ನು ಕನ್ನಡಕ್ಕೆ ಡಬ್ ಮಾಡಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ವಿದ್ಯಾಕಾಶಿ, ಸಾಧನಕೇರಿ, ಗಂಡುಮೆಟ್ಟಿನ ನಾಡು, ಶ್ರೇಷ್ಠ ಸಾಹಿತಿಗಳು, ಕವಿ ವರೇಣ್ಯರ ಸಿರಿಬೀಡು, ನಾಕು ತಂತಿ ಮೊಳಗಿದ ತಾಣ ಎಂದೇ ಪ್ರಸಿದ್ಧವಾದ ಧಾರಾವಾಡ ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಮಹಾಕವಿ ಪಂಪ ಮಹಾಮಂಟಪದ ಅಂಬಿಕಾತನಯದತ್ತ ವೇದಿಕೆಯಲ್ಲಿ ಇಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಡಾ. ಕಂಬಾರ ಅವರು ಭಾಷಣ ಮಾಡಿದರು.ಮಾತೃ ಭಾಷೆ, ರಾಜ್ಯ ಭಾಷೆ ಮತ್ತು ಕಲಿಕೆಯ ಭಾಷೆ ಕನ್ನಡವೇ ಆಗಬೇಕು ಎಂದು ಅಸಂಖ್ಯಾತ ಕನ್ನಡ ಸಾಹಿತ್ಯಾಸಕ್ತರ ಪ್ರಚಂಡ ಕರತಾಡನದ ನಡುವೆ ಘೋಷಿಸಿದರು.
ತಾಯಿ ನುಡಿಯಲ್ಲೇ ಶಿಕ್ಷಣ ಕೊಡಬೇಕೆಂಬ ಸಿದ್ಧಾಂತ ಈಗ ಸರ್ವಸಮ್ಮತವಾಗಿದೆ.ಕನ್ನಡವೇ ಶಿಕ್ಷಣ ಮಾಧ್ಯಮ ಆಗಬೇಕು.ಶಿಕ್ಷಕನೊಬ್ಬನ ಸಂಕಲ್ಪದಿಂದ ಮಾತ್ರ ಇದು ಬದಲಾಗುವುದಿಲ್ಲ. ಇದು ರಾಜ್ಯ ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿಯೂ ಆಗಿದೆ.ಈ ನಿಟ್ಟಿನಲ್ಲಿ ಸರ್ಕಾರವು ಮನಸ್ಸು ಮಾಡಬೇಕು.ಜನತೆಯೂ ಕೂಡ ಇದನ್ನೇ ಬಯಸಬೇಕು. ಶಿಕ್ಷಕ, ಸರ್ಕಾರ ಮತ್ತು ಜನರು- ಈ ಮೂವರು ಸೇರಿದಾಗಲೇ ಕನ್ನಡ ಮಾಧ್ಯಮ ಸುಲಭ ಸಾಧ್ಯ ಎಂದು ಅವರು ಹೇಳಿದರು.
ತಮ್ಮ ಭಾಷಣದುದ್ದಕ್ಕೂ ಕನ್ನಡದ ಸಿರಿತನ-ಹಿರಿತನದ ಬಗ್ಗೆ ಸಾರಿದ ಅವರು, ರಾಜ್ಯದ ಭಾಷೆ, ಸಂಸ್ಕøತಿ ಮತ್ತು ಪರಂಪರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು.ಇದನ್ನು ಅರಿತು ತನ್ನ ಪ್ರಜೆಗಳಿಗೆ ಎಂಥ ಶಿಕ್ಷಣ ನೀಡಬೇಕು ಎಂಬುದನ್ನು ನಿರ್ಧರಿಸುವ ಕರ್ತವ್ಯ ಮತ್ತು ಅಧಿಕಾರವೂ ಸರ್ಕಾರದ್ದೇ ಆಗಿದೆ ಎಂದು ಸ್ಪಷ್ಟಪಡಿಸಿದರು.
ಅಖಂಡ ಕರ್ನಾಟಕವಾಗಿ 70 ವರ್ಷಗಳಾದರೂ ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಲು ನೂರಾರು ಸರ್ಕಾರಿ ಆಜ್ಞೆಗಳನ್ನು ಹೊರಡಿಸಿದ್ದರೂ, ಅದನ್ನು ಜಾರಿಗೊಳಿಸಲಾಗದೆ ಕೈ ಸೋತು ಕುಳಿತಿದ್ದೇವೆ. ಬ್ರಿಟಿಷರು ಕೊಟ್ಟ ಆಂಗ್ಲ ಭಾಷೆಯನ್ನೇ ಈಗಲೂ ತಿದ್ದುತ್ತಾ ಕುಳಿತಿದ್ದೇವೆ ಎಂದು ಅವರು ವಿಷಾದಿಸಿದರು.
ಪ್ರಾಥಮಿಕ ಶಿಕ್ಷಣದ ಆರಂಭದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಪರಭಾಷೆಯ ಮೂಲಕ ನೀಡುತ್ತಿರುವ ಶಿಕ್ಷಣ ನಮ್ಮ ಮಕ್ಕಳ ಬುದ್ದಿಶಕ್ತಿಯನ್ನು ಬೆಂಡು ಮಾಡುತ್ತಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕøತರು ವಾಸ್ತವ ಸನ್ನಿವೇಶವನ್ನು ತಿಳಿಸಿದರು.
ನಮ್ಮೆಲ್ಲ ದೈನಿಕ ವ್ಯವಹಾರಕ್ಕೆ, ಸಾಂಸ್ಕøತಿಕ ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ಕನ್ನಡವೇ ಅನಿವಾರ್ಯ.ಸರ್ಕಾರವಾಗಲಿ, ಶಿಕ್ಷಣ ಮತ್ತು ಸಂಸ್ಕøತಿ ಸಂಸ್ಥೆಗಳಾಗಲಿ, ವ್ಯಾಪಾರ-ವಾಣಿಜ್ಯ ವ್ಯವಹಾರಗಳಲ್ಲಿ ಕನ್ನಡ ಭಾಷೆಗೇ ಮೊದಲ ಆದ್ಯತೆಯ ಸ್ಥಾನ ನೀಡಬೇಕು.ಕನ್ನಡ ಭಾಷೆ ವಿಚಾರದಲ್ಲಿ ಎಷ್ಟೇ ಶ್ರಮಿಸಿದರೂ ಸಾಲದು.ರಾಜ್ಯಭಾಷೆಯ ಸಂರಕ್ಷಣೆಯ ವಿಷಯದಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸಬೇಕೆಂದು ಸಮ್ಮೇಳನಾಧ್ಯಕ್ಷರು ಕರೆ ನೀಡಿದರು.
ಏಕೀಕರಣದಿಂದ ಪ್ರತ್ಯೇಕೀಕರಣದ ಕಿರುದನಿಯತ್ತ ವಾಲುತ್ತಿರುವ ಸನ್ನಿವೇಶದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಪ್ರತ್ಯೇಕತೆಯೊಂದೇ ಇದಕ್ಕೆ ಪರಿಹಾರವಲ್ಲ. ಈ ಬಗ್ಗೆ ಯಾರೂ ಸೊಲ್ಲೇತ್ತಬಾರದು.ಒಂದು ರಾಜ್ಯದ ಅಭಿವೃದ್ಧಿಯ ಆಶಯವನ್ನು ಇದು ಖಂಡಿತ ಈಡೇರಿಸುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಎರಡು ಕರ್ನಾಟಕ ಬೇಕೆನ್ನುವ ಮಹಾನುಭಾವರಿದ್ದಾರೆ. ಒಂದೇ ಜಿಲ್ಲೆಯನ್ನು ಎರಡಾಗಿ ಒಡೆಯಬೇಕೆನ್ನುವವರೂ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕರ್ನಾಟಕ ಏಕೀಕರಣಕ್ಕೆ ಮಹನೀಯರ ಶ್ರಮವನ್ನು ಸ್ಮರಿಸಿದ ಡಾ. ಕಂಬಾರರು, ಒಂದು ಜಿಲ್ಲೆಯನ್ನು ಎರಡು ಮಾಡಿ ಇಡೀ ಜಿಲ್ಲೆಯನ್ನು ಕಳೆದುಕೊಳ್ಳದಿರೋಣ ಎಂದು ಅಖಂಡ ಕರ್ನಾಟಕ ಅಚಲತೆಯನ್ನು ಪ್ರತಿಪಾದಿಸಿದರು.
ಪ್ರತಿವರ್ಷ ನೂರಾರು ಕನ್ನಡ ಮಾಧ್ಯಮದ ಶಾಲೆಗಳನ್ನು ಮುಚ್ಚಿ ಇಂಗ್ಲಿಷ್ ಮ್ಯಾಧಮದ ಖಾಸಗಿ ಸ್ಕೂಲುಗಳು ಹಳ್ಳಿ ಹಳ್ಳಿಗಳಲ್ಲಿ ತಲೆಎತ್ತುತ್ತಿವೆ ಇಂಥ ಶಾಲೆಗಳ ಆಡಳಿತ ಮಂಡಳಿಯಲ್ಲಿ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳೇ ಇದ್ದಾರೆ.ಈ ಎಲ್ಲ ಸಂಸ್ಥೆಗಳಲ್ಲಿ ಶಿಕ್ಷಣ ವ್ಯಾಪಾರೀಕರಣವಾಗಿದೆ ಎಂದು ಅವರು ವಿಷಾದದಿಂದ ನುಡಿದರು.
ನಮ್ಮ ಬದುಕಿಗೆ ಕನ್ನಡ ಭಾಷೆಯೊಂದೇ ಜೀವ. ಜೀವನ, ಪರಂಪರೆ ಮತ್ತು ಸಂಸ್ಕøತಿ. ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆಗೆ ಈಗ ಹಿಂದೆಂದೂ ಕಾಣದ ರೀತಿಯಲ್ಲಿ ಕುತ್ತು ಬಂದಿದೆ. ಈ ಸಮಸ್ಯೆಯನ್ನು ಎಲ್ಲರೂ ಒಂದಾಗಿ ಸೇರಿ ಬಗೆಹರಿಸಬೇಕು ಎಂದು ಅವರು ಕನ್ನಡ ಕುಲಕೋಟಿಗೆ ಕರೆ ಕೊಟ್ಟರು.
ಮಾತೃಭಾಷೆಯಲ್ಲೇ ಕನ್ನಡ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅವರು ಮೂರು ಮಹತ್ವದ ಸಲಹೆಗಳನ್ನು ನೀಡಿದರು. ಒಂದರಿಂದ ಏಳನೇ ತರಗತಿವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು (ಪ್ರಾಥಮಿಕ ಪೂರ್ವ ತರಗತಿಯೊಂದಿಗೆ) ರಾಷ್ಟ್ರೀಯಕರಣ ಮಾಡಬೇಕು; ತುರ್ತಾಗಿ ಸರ್ಕಾರಿ ಶಾಲೆಗಳ ಸುಧಾರಣೆ ಮಾಡಬೇಕು ಹಾಗೂ ಆನಂತರದ ಎಂಟನೇ ತರಗತಿಯಿಂದ ಶಿಕ್ಷಣವನ್ನು ಖಾಸಗಿಯವರಿಗೆ ನೀಡಬಹುದು ಎಂದು ಅವರು ತಿಳಿಸಿದರು.
ಈಗ ಕನ್ನಡಕ್ಕೆ ನೆರವಾಗಬಲ್ಲ ಪ್ರಯುಖ ವ್ಯಕ್ತಿ-ಶಕ್ತಿ ಎಂದರೆ ಶಿಕ್ಷಕ ಮಾತ್ರ. ಹಂಗಾಮಿ ಶಿಕ್ಷಕರನ್ನು ಖಾಯಂಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಶಿಕ್ಷಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಯಾವ ಸರ್ಕಾರಕ್ಕೂ ಶೋಭೆ ತರುವುದಿಲ್ಲ ಎಂದು ಅವರು ಹೇಳಿದರು.
ಪ್ರಸ್ತುತ ಸನ್ನಿವೇಶದಲ್ಲಿ ಇಂಗ್ಲಿಷ್ ಮಾಧ್ಯಮದ ಅನಿವಾರ್ಯತೆಯ ಬಗ್ಗೆಯೂ ಸಹ ಉಲ್ಲೇಖಿಸಿರುವ ಅವರು, ವ್ಯಾಟ್ಸಾಪ್, ಅಂತರ್ಜಾಲ, ಸಾಮಾಜಿಕ ಜಾಲ ತಾಣಗಳಲ್ಲಿ ಕನ್ನಡದ ಬಳಕೆ ಹೆಚ್ಚಾದಾಗ ನಮ್ಮ ಭಾಷೆ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ವಿಶ್ಲೇಷಿಸಿದರು.
ನಮ್ಮ ದೇಶ ಉಳಿದ ರಾಷ್ಟ್ರಗಳಂತೆ ಪ್ರಗತಿಪಥದಲ್ಲಿ ಮುಂದುವರಿಯಬೇಕಾದರೆ ಇಂಗ್ಲಿಷ್ ಅನಿವಾರ್ಯ ಎನ್ನುವುದು ಒಂದು ವಾದ. ಕನ್ನಡ ಶಿಕ್ಷಣವನ್ನು ಒಂದು ಮಾಧ್ಯಮವನ್ನಾಗಿಸಿದರೆ ಐತಿಹಾಸಿಕವಾಗಿ ನಾವು ಹಿಂದುಳಿಯಬಹುದು ಎನ್ನುವ ಭಯವೂ ಕೆಲವರಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಭಾಷೆಯ ವ್ಯಾಮೋಹ ನಮ್ಮನ್ನು ಏನೂ ಯೋಚಿಸದಂತೆ ಮಾಡಿದೆ ಎಂದು ಡಾ.ಚಂದ್ರಶೇಖರ ಕಂಬಾರರು ಹೇಳಿದರು.
ಚಲನಚಿತ್ರಗಳನ್ನು ಡಬ್ ಮಾಡಬಾರದೆಂಬುದು ಯೋಗ್ಯವಾದ ನಿರ್ಣಯ.ಆದರೆ ಟಿವಿಗಳಲ್ಲಿ ಮಕ್ಕಳಿಗೆ ಯೋಗ್ಯ ಪಾಠವಾಗಬಹುದಾದ ವಾಹಿನಿಗಳನ್ನು ಕನ್ನಡಕ್ಕೆ ಡಬ್ ಮಾಡಬಹುದು ಎಂದು ಅವರು ಸಲಹೆ ನೀಡಿದರು.
ಸಮ್ಮೇಳನಾಧ್ಯಕ್ಷ ಡಾ ಚಂದ್ರಶೇಖರ ಕಂಬಾರ ಅವರು ಭಾಷಣವು ಕೇವಲ ಕನ್ನಡ, ಕರುನಾಡು, ಕನ್ನಡಿಗರು ಮತ್ತು ಭಾಷೆ, ಸಂಸ್ಕøತಿ ಪರಂಪರೆಗಷ್ಟೇ ಸೀಮಿತವಾಗಿರಲಿಲ್ಲ. ಶಾಲೆಗಳ ಸಬಲೀಕರಣ, ತಂತ್ರಾಂಶ ಬಳಕೆ, ತಂತ್ರಜ್ಞಾನ ಅಭಿವೃದ್ಧಿ, ಕೃಷಿ ಶಾಸ್ತ್ರ, ವಿಜ್ಞಾನ, ವೈದ್ಯಕೀಯ ಶಾಸ್ತ್ರದಲ್ಲಿ ಹೊಸ ಸಂಶೋಧನೆ, ಟಿವಿ-ಜ್ಞಾನವಾಹಿನಿ ಮೊದಲಾದ ವಿಷಯಗಳ ಬಗ್ಗೆಯೂ ಅವರು ತಮ್ಮ ವಾಗ್ಝರಿಯನ್ನು ಪ್ರವಹಿಸಿದರು.
ತಮ್ಮ ಭಾಷಣದಲ್ಲಿ ಅವರು ರಾಷ್ಟ್ರಪತಿ ಮಹಾತ್ಮಗಾಂಧಿ, ಬ್ರಿಟಿಷ್ ಶಿಕ್ಷಣ ತಜ್ಞ ಮೆಕಾಲೆ, ಮಹಾ ದಾರ್ಶನಿಕರಾದ ಶಿವರಾಮ ಕಾರಂತ ಮತ್ತು ಕುವೆಂಪು, ಖ್ಯಾತ ಸಾಹಿತಿ-ಲೇಖಕ ಪೂರ್ಣಚಂದ್ರ ತೇಜಸ್ವಿ, ವಿಚಾರವಾದಿ ಡಾ.ಎಂ.ಎಂ. ಕಲಬುರಗಿ, ಗಿರಡ್ಡಿ ಗೋವಿಂದರಾಜು, ಸಾವಳಗಿ ಶಿವಲಿಂಗೇಶ್ವರ, ಎಸ್.ಎಸ್.ಭೂಸನೂರಮಠ, ಬಿಎಂಶ್ರೀ ಮೊದಲಾದ ಗಣ್ಯರನ್ನು ಸ್ಮರಿಸಿದರು.
ಇದಕ್ಕೂ ಮುನ್ನ ಧಾರವಾಡ ಜಿಲ್ಲೆ ಉಸ್ತುವಾರಿ ಸಚಿವ ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಪರಿಷತ್ ಧ್ವಜವನ್ನು ಹಾಗೂ ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ನಾಡ ಧ್ವಜಾರೋಹಣ ಮಾಡಿದರು. ನಂತರ ಸಮ್ಮೇಳನಾಧ್ಯಕ್ಷರನ್ನು ಅದ್ಧೂರಿ ಮೆರವಣಿಗೆ ಮೂಲಕ ಪ್ರಧಾನ ವೇದಿಕೆಗೆ ಕರೆತರಲಾಯಿತು.ಅನೇಕ ಗಣ್ಯರು ಮೆರವಣಿಗೆಯಲ್ಲಿ ಡಾ.ಕಂಬಾರರ ಜೊತೆ ಸಾಗಿ ಬಂದರು.
ಮುಖ್ಯಮಂತ್ರಿ ಎಚ್ಡಿ.ಕುಮಾರಸ್ವಾಮಿ ಉದ್ಘಾಟನೆ ನೆರವೇರಿಸಿದರು.ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪೆÇ್ರ.ಚಂದ್ರಶೇಖರ ಪಾಟೀಲ ಮಾತನಾಡಿದರು.ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲಾ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಹಿರಿಯ ಪತ್ರಕರ್ತರಾದ ಡಾ.ಪಾಟೀಲ ಪುಟ್ಟಪ್ಪ, ಸಂಸದ ಪ್ರಹ್ಲಾದ್ ಜೋಶಿ, ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಶಾಸಕರು, ಜನಪ್ರತಿನಿಧಿಗಳು, ಉನ್ನತಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.