ಕನ್ನಡ ಶಿಕ್ಷಣ ಮಾಧ್ಯಮದಲ್ಲಿ ಓದಿದರೆ, ನಾವು ಹಿಂದುಳಿಯುತ್ತೇವೆ ಎನ್ನುವ ಭಯ ಕೆಲವರಲ್ಲಿದೆ

ಧಾರವಾಡ, ಜ.4-ನಮ್ಮ ದೇಶ ಉಳಿದ ರಾಷ್ಟ್ರಗಳಂತೆ ಪ್ರಗತಿಪಥದಲ್ಲಿ ಮುಂದುವರಿಯಬೇಕಾದರೆ ಇಂಗ್ಲಿಷ್ ಅನಿವಾರ್ಯವೂ ಒಂದು ವಾದ. ಕನ್ನಡ ಶಿಕ್ಷಣವನ್ನು ಒಂದು ಮಾಧ್ಯಮವನ್ನಾಗಿಸಿದರೆ ಐತಿಹಾಸಿಕವಾಗಿ ನಾವು ಹಿಂದುಳಿಯಬಹುದು ಎನ್ನುವ ಭಯವೂ ಕೆಲವರಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಭಾಷೆಯ ವ್ಯಾಮೋಹ ನಮ್ಮನ್ನು ಏನೂ ಯೋಚಿಸದಂತೆ ಮಾಡಿದೆ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರರು ಹೇಳಿದ್ಧಾರೆ.

ಧಾರಾವಾಡ ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಮಹಾಕವಿ ಪಂಪ ಮಹಾಮಂಟಪದ ಅಂಬಿಕಾತನಯದತ್ತ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರಾಗಿ ಭಾಷಣ ಮಾಡಿದ ಅವರು, ವಿದ್ಯೆ ಎಂದರೆ ಇಂಗ್ಲಿಷ್ ಎಂಬ ಸಮೀಕರಣ ನಮ್ಮಲ್ಲಿ ಮೊದಲಿನಿಂದಲೂ ಇದೆ.ಈ ವಾದವನ್ನು ಸಮರ್ಥಿಸುವಂತೆ ಬ್ರಿಟಿಷರು ಆಗ ನಿರ್ಮಿಸಿಕೊಟ್ಟ ಪ್ರತಿಯೊಂದು ವ್ಯವಸ್ಥೆಯು ಅವರಿಟ್ಟ ಕ್ರಮದಲ್ಲೇ ಮುಂದುವರಿದಿದೆ ಎಂಬ ಅಂಶವನ್ನು ಉಲ್ಲೇಖಿಸಿದರು.

ಮಹತ್ವದ ವಿಷಯಗಳಾದ ಭೌತಶಾಸ್ತ್ರ, ಗಣಿತ, ವೈಧ್ಯಶಾಸ್ತ್ರ, ತಂತ್ರಜ್ಞಾನ ಇವನ್ನು ಕನ್ನಡದಲ್ಲಿ ಕಲಿಸಲು ಸಾಧ್ಯವಿಲ್ಲ ಎಂದು ಎಲ್ಲರೂ ಹೇಳುತ್ತಾರೆ.ನಾವು ಕಲಿಸಬೇಕಾದ ಶಾಸ್ತ್ರವೆಲ್ಲವೂ ಆಂಗ್ಲ ಬಾಷೆಯಲ್ಲೇ ಇರುವುದರಿಂದ ಶಿಕ್ಷಕರೆಲ್ಲರೂ ಇಂಗ್ಲಿಷ್‍ನಲ್ಲೇ ಕಲಿತು. ಬಂದವರಾದ್ದರಿಂದ ಇಂಗ್ಲಿಷ್ ಭಾಷೆಯೇ ಅದಕ್ಕೆ ಸರಿಯಾದ ಮಾರ್ಗವೆಂದು ಎಲ್ಲರೂ ನಂಬಿದ್ದಾರೆ. ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾಗಿರುವುದರಿಂದ ಅದು ನಮ್ಮ ಭಾಷೆಯೂ ಹೌದು.ನಮ್ಮ ರಾಷ್ಟ್ರದ ಸಂವಿಧಾನವೂ ಆಂಗ್ಲ ಭಾಷೆಯನ್ನು ಭಾರತೀಯ ಭಾಷೆಯನ್ನಾಗಿ ಪರಿಗಣಿಸಿದೆ. ಈ ಭಾಷೆ ವಸಾಹತುಶಾಹಿ ಇತಿಹಾಸದ ಒಂದು ಕೊಡುಗೆ ಎಂದು ಡಾ. ಕಂಬಾರ ವಿಶ್ಲೇಷಿಸಿದರು.

ಇತಿಹಾಸ ಮತ್ತು ಅದರೊಂದಿಗಿನ ಇಂಗ್ಲಿಷ್ ನಂಟನ್ನು ಮರೆಯುವಂತಿಲ್ಲ. ಭಾವನಾತ್ಮಕ ಕಾರಣಗಳಿಗಾಗಿ ತಾನಾಗಿಯೇ ಬಂದಿರುವ ಒಂದು ಭಾಷೆಯನ್ನು ಬಿಟ್ಟುಕೊಡುವುದು ಮೂರ್ಖತನವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡದ ಸಾಹಿತ್ಯ ಶ್ರೀಮಂತಿಕೆಯ ಬಗ್ಗೆ ಎರಡು ಮಾತಿಲ್ಲ ನಿಜ. ಆದರೂ ಆಡಳಿತ, ಶಿಕ್ಷಣ, ಹಾಗೂ ಬೌದ್ಧಿಕ ಚಟುವಟಿಕೆಗಳ ಭಾಷೆ ಇಂಗ್ಲಿಷ್. ಪೂಜೆ ಪುನಸ್ಕಾರಗಳ ಭಾಷೆ ಸಂಸ್ಕøತ ಹಾಗೂ ಕನ್ನಡ ಮಾತ್ರ ಸಾಹಿತ್ಯದ ಭಾಷೆಯಾಗಿದೆ.ಎಂದು ಅವರು ವ್ಯಾಖ್ಯಾನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ