ಬೆಂಗಳೂರು, ಜ.4-ಲೋಕಸಭೆ ಚುನಾವಣೆಗೆ ಮಹಿಳಾ ಮತದಾರರನ್ನು ಸೆಳೆಯುವ ಸಲುವಾಗಿ ಕಾಂಗ್ರೆಸ್ ಪ್ರಿಯದರ್ಶಿನಿ ಎಂಬ ಹೊಸ ಘಟಕವನ್ನು ಆರಂಭಿಸಿದ್ದು, ರಾಷ್ಟ್ರಾದ್ಯಂತ ಬಲವಾದ ಸಂಘಟನೆಗೆ ಸಂಕಲ್ಪ ಮಾಡಿದೆ.
16 ರಿಂದ 35 ವರ್ಷದೊಳಗಿನ ಯುವತಿಯರಿಗೆ ಪ್ರಿಯದರ್ಶಿನಿ ಉತ್ತಮ ವೇದಿಕೆಯಾಗಿದ್ದು, ಇಲ್ಲಿ ನೋಂದಾಯಿಸಿಕೊಳ್ಳುವವರಿಗೆ ರಾಜಕೀಯ, ವೃತ್ತಿ ಕೌಶಲ್ಯ, ಆತ್ಮರಕ್ಷಣೆ ಸೇರಿದಂತೆ ಹಲವಾರು ರೀತಿಯ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ.ಈಗಾಗಲೇ ಎನ್‍ಎಸ್‍ಯುಐ ಮತ್ತು ಯುವ ಕಾಂಗ್ರೆಸ್ ಘಟಕಗಳು ಕಾಂಗ್ರೆಸ್‍ನ ಶಕ್ತಿಯನ್ನು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಮಹಿಳಾ ಯುವ ಮತದಾರರನ್ನು ಸೆಳೆಯುವ ಉದ್ದೇಶದಿಂದ ಪ್ರಿಯದರ್ಶಿನಿ ಘಟಕಗಳನ್ನು ಆರಂಭಿಸಲಾಗಿದೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಘಟಕದ ರಾಷ್ಟ್ರೀಯ ಸಂಚಾಲಕರಾದ ಆದಿತಿ ಸಿಂಗ್ ಅವರು ಮಾತನಾಡಿ, ಮಹಿಳೆಯರಿಗೆ ಪ್ರಿಯದರ್ಶಿನಿ ಸೂಕ್ತ ವೇದಿಕೆಯಾಗಿದೆ. ಮನುವಾದಿಗಳು ಮಹಿಳಾ ಸ್ವಾತಂತ್ರ್ಯವನ್ನು ಹತ್ತಿಕ್ಕಿ ವೈಯಕ್ತಿಕ ವಿಚಾರಗಳ ಮೇಲೆ ದಾಳಿ ನಡೆಸುತ್ತಿರುವ ವೇಳೆ ಅದನ್ನು ಸಂಘಟನಾತ್ಮಕವಾಗಿ ಎದುರಿಸಲು ಪ್ರಿಯದರ್ಶಿನಿ ಪ್ರಬಲವಾಗಿ ಕೆಲಸ ಮಾಡಲಿದೆ.ಯುವತಿಯರನ್ನು ನಮ್ಮ ಘಟಕಕ್ಕೆ ಕರೆಸಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು.ಪರಸ್ಪರ ವೈಚಾರಿಕ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು.ಆರೋಗ್ಯವೂ ಸೇರಿದಂತೆ ಹಲವಾರು ವಿಷಯಗಳಲ್ಲಿ ಕಾಲಕಾಲಕ್ಕೆ ತರಬೇತಿ ನೀಡಲಾಗುವುದು.ಮಹಿಳಾ ಸಬಲೀಕರಣ ನಮ್ಮ ಪ್ರಮುಖ ಉದ್ದೇಶವಾಗಿದ್ದು, ಅದನ್ನು ಪ್ರಿಯದರ್ಶಿನಿ ವೇದಿಕೆ ಮೂಲಕ ಜಾರಿಗೆ ತರಲಾಗುತ್ತಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಮಹಿಳೆಯರಲ್ಲಿ ಅಗಾಧವಾದ ಶಕ್ತಿ ಇದೆ. ಸೂಕ್ತ ವೇದಿಕೆ ಸಿಕ್ಕಾಗ ಅವರಸಾಮಥ್ರ್ಯ ತೋರಿಸಬಲ್ಲರು ಎಂದು ಹಲವಾರು ನಿದರ್ಶನಗಳಿವೆ. ವರದಕ್ಷಿಣೆ ಕಿರುಕುಳ, ಉದ್ಯೋಗ, ಅಪೌಷ್ಟಿಕತೆ, ಲೈಂಗಿಕ ಕಿರುಕುಳ ಸೇರಿದಂತೆ ಹಲವಾರು ವಿಷಯಗಳಲ್ಲಿ ಮಹಿಳೆಯರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಹಾಗಾಗಿ ಕಾಂಗ್ರೆಸ್ ಪ್ರಿಯದರ್ಶಿನಿ ಘಟಕ ಆರಂಭಿಸಿದೆ ಎಂದರು.
ಬಿಜೆಪಿ ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿರಬೇಕು ಎಂಬ ವಾದವನ್ನು ಪ್ರತಿಪಾದನೆ ಮಾಡುತ್ತಿದೆ.ಸಮಾನತೆಗೆ ವಿರುದ್ಧವಿದೆ.ಆದರೆ ಕಾಂಗ್ರೆಸ್ ಮಹಿಳೆಯರೂ ಸೇರಿದಂತೆ ಎಲ್ಲ ವರ್ಗದವರೂ ಸಮಾಜದ ಮುಖ್ಯವಾಹಿನಿಯಲ್ಲಿ ಎಂಬ ತತ್ವದ ಮೇಲೆ ನಂಬಿಕೆ ಇಟ್ಟಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆಎಂದರು.
ರಾಜ್ಯ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷರಾದ ಡಾ.ಪುಷ್ಪಾ ಅಮರ್‍ನಾಥ್ ಮಹಿಳಾ ಕಾಂಗ್ರೆಸ್ ಉಸ್ತುವಾರಿ ನಾಯಕರಾದ ರಾಧಾಕೃಷ್ಣ ಪ್ರಿಯದರ್ಶಿನಿ ರಾಜ್ಯ ಘಟಕದ ಉಸ್ತುವಾರಿ ಭವ್ಯ ನರಸಿಂಹಮೂರ್ತಿ ಸೇರಿದಂತೆ ಹಲವಾರು ಮಂದಿ ಪತ್ರಿಕಾಗೋಷ್ಠಿಯಲ್ಲಿದ್ದರು.