ರಾಜ್ಯದಲ್ಲಿ ಧೂಮಪಾನ ಸೇವನೆ ನಿಷೇದ ಮಾಡುವ ನಿಟ್ಟಿನಲ್ಲಿ ಚಿಂತನೆ : ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಬೆಂಗಳೂರು, ಜ.4-ಕರ್ನಾಟಕದಲ್ಲಿ ಧೂಮಪಾನ ಸೇವನೆ ಸಂಪೂರ್ಣ ನಿಷೇಧ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.

ನಗರದ ಮಲ್ಲೇಶ್ವರಂ ಬಿಬಿಎಂಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧೂಮಪಾನ ಮುಕ್ತ ಬೆಂಗಳೂರು ಅಭಿಯಾನದ ವರದಿ ಹಾಗೂ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದರು.

ಗುಜರಾತ್‍ನಲ್ಲಿ ಲಿಕ್ಕರ್ ಬ್ಯಾನ್ ಮಾಡಿ ಜಾಗೃತಿ ಮೂಡಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಧೂಮಪಾನ ಸೇವನೆ ನಿಷೇಧ ಮಾಡಬಹುದೇ ಎಂಬುದನ್ನೇ ಪರಿಶೀಲಿಸಬೇಕಿದೆ. ಇದರಿಂದ ಪೊಲೀಸರಿಗೆ ಹೆಚ್ಚು ಶ್ರಮವಾಗಬಹುದು. ಆದರೆ ಜನರಲ್ಲಿ ಪ್ರಬಲವಾಗಿ ಅರಿವು ಮೂಡಿಸಲು ಹೆಚ್ಚು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮಾದಕ ವಸ್ತುಗಳ ನಿಯಂತ್ರಣ ಮಾಡಲು ರಾಜ್ಯದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಸಲಾಗುತ್ತಿದೆ.ಅದರಲ್ಲೂ ಕಾಲೇಜು ಆವರಣಗಳಲ್ಲಿ ಪರಿಣಾಮಕಾರಿಯಾಗಿ ಈ ಅಭಿಯಾನ ಯಶಸ್ವಿಯಾಗಿದೆ.ಇಂತಹ ಅಭಿಯಾನದಲ್ಲೇ ಸಿಗರೇಟು ಸೇವನೆಯನ್ನು ಸೇರ್ಪಡೆಗೊಳಿಸಿ ಕನಿಷ್ಠ ಪಕ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದರಿಂದ ದೂರ ಉಳಿಯುವಂತೆ ಮಾಡಬೇಕಿದೆ.ಜೊತೆಗೆ ಕಾಲೇಜು ಸಮೀಪ ಸಿಗರೇಟು ಮಾರಾಟ ಅಂಗಡಿಗಳನ್ನು ಮುಚ್ಚಿಸಿ ಎಂದು ಸಲಹೆ ಮಾಡಿದರು.

ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ರಜೆಯಲ್ಲಿ ತುಮಕೂರಿಗೆ ತೆರಳುತ್ತಿದ್ದೆ.ಬಸ್‍ನಲ್ಲಿ ಹೋಗುವಾಗ ನಾವು ಕುಳಿತುಕೊಳ್ಳುತ್ತಿದ್ದ ಸೀಟ್ ಬಳಿಯೇ ಧೂಮಪಾನ ನಿಷೇಧ ಎಂದು ಬರೆದಿದ್ದರೂ, ನನ್ನ ಪಕ್ಕ ಕೂರುತ್ತಿದ್ದ ವ್ಯಕ್ತಿ ಬೀಡಿ ಸೇದುತ್ತಿದ್ದರು.ಅಂತಹ ವ್ಯಕ್ತಿಗಳೊಂದಿಗೆ ನಾನು ಸಾಕಷ್ಟು ಬಾರಿ ಜಗಳವಾಡಿದ್ದೆ ಎಂದು ತಮ್ಮ ಅಂದಿನ ದಿನಗಳಲ್ಲಿ ಮೆಲುಕು ಹಾಕಿದರು.

ಪ್ರಸ್ತುತ ಸಾಂಕ್ರಾಮಿಕವಲ್ಲದ ಶೇ.72ರಷ್ಟು ಖಾಯಿಲೆಗಳಿಂದಾಗಿ ಜನರು ಸಾವನ್ನಪ್ಪುತ್ತಿದ್ದಾರೆ.ಸಿಗರೇಟು ಸೇದುವುದೂ ಸಹ ಆರೋಗ್ಯಕ್ಕೆ ಹಾನಿಕಾರಕ.ಇಂತಹ ಅಭ್ಯಾಸದಿಂದ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ.ಬಿಬಿಎಂಪಿ ಧೂಮಪಾನ ಮುಕ್ತ ಮಾಡಲು ಹೊರಟಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.

ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ಆಡಳಿತ ಪಕ್ಷದ ನಾಯಕ ಶಿವರಾಜ್, ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ದಾಳಿ ಏಕೆ ತಿಳಿದಿಲ್ಲ:

ಚಲನಚಿತ್ರ ನಟರ ಮನೆ ಮೇಲೆ ಐಟಿ ದಾಳಿ ಏಕೆ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಅವರ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ರೇಡ್ ಬಗ್ಗೆ ಮಾಹಿತಿ ನಮಗೆ ಗೊತ್ತಿಲ್ಲ. ಸಾಮಾನ್ಯವಾಗಿ ಸ್ಥಳೀಯ ಪೊಲೀಸರಿಗೆ ತಿಳಿಸಿರುತ್ತಾರೆ. ಎಷ್ಟು ಜನ ಪೆÇಲೀಸರು ಬೇಕು, ಯಾವ ಕಾರಣಕ್ಕೆ ಎಂಬ ಮಾಹಿತಿಯನ್ನೂ ನೀಡಿರುತ್ತಾರೆ ಎಂದರು.

ಆದರೆ ರೇಡ್ ಮಾಡಿದ್ದಾರೆ ಎಂಬುದು ಮಾತ್ರ ಗೊತ್ತು.ಅವರ ಮನೆಯಲ್ಲಿ ಎಷ್ಟು ಬಂಗಾರ, ಒಡವೆ ಸಿಕ್ಕಿದೆ ಎಂಬುದು ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ