ಬೆಂಗಳೂರು, ಜ.3- ಕೃಷಿ ಭಾಗ್ಯ ಯೋಜನೆ ಅನುಷ್ಠಾನದ ಹೆಸರಿನಲ್ಲಿ 800 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಸಚಿವ ಕೃಷ್ಣಭೆರೇಗೌಡ ಹಾಗೂ ಕೆಲ ಹಿರಿಯ ಐಎಎಸ್ ಅಧಿಕಾರಿಗಳ ವಿರುದ್ಧ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಅವ್ಯವಹಾರದ ದಾಖಲೆಗಳೊಂದಿಗೆ ಇಂದು ಎಸಿಬಿ ಕಚೇರಿಗೆ ಆಗಮಿಸಿ ದೂರು ದಾಖಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣಭೆರೇಗೌಡ, ಐಎಎಸ್ ಅಧಿಕಾರಿಗಳಾದ ಪಾಂಡುರಂಗ ಬಿ.ನಾಯಕ್ ಮತ್ತು ಜಿ.ಸತೀಶ್ ವಿರುದ್ಧ ಹಣ ದುರುಪಯೋಗದ ದೂರು ದಾಖಲಿಸಿದ್ದೇನೆ ಎಂದು ಹೇಳಿದರು.
ಎಸಿಬಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿರುವುದರ ಜತೆಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಕೃಷ್ಣಭಾಗ್ಯ ಯೋಜನೆಗೆಂದು ಬಿಡುಗಡೆಯಾದ 1608 ಕೋಟಿ ರೂ.ಗಳಲ್ಲಿ 800 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ. ಈ ಅವ್ಯವಹಾರಕ್ಕೆ 2015 ರಿಂದ 2018ರ ವರೆಗೂ ಕೃಷಿ ಇಲಾಖೆ ಆಯುಕ್ತರಾಗಿದ್ದ ಪಾಂಡುರಂಗನಾಯಕ್ ಮತ್ತು ಜಿ.ಸತೀಶ್ ಹೊಣೆಗಾರರಾಗಿದ್ದಾರೆ ಎಂದರು.
ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಿಸುವ ಹೆಸರಿನಲ್ಲಿ ಹಣ ಲೂಟಿ ಮಾಡಲಾಗಿದೆ. ಹೊಂಡಗಳ ನಿರ್ಮಾಣ, ಪಾಲಿಥಿನ್ ಹೊದಿಕೆ, ಡೀಸೆಲ್ ಪಂಪ್ಸೆಟ್ಗಳ ಅಳವಡಿಕೆ, ಲಘು ನೀರಾವರಿ ಕಾರ್ಯ ಮತ್ತು ನೆರಳು ಪರದೆ ನಿರ್ಮಾಣದ ಹೆಸರಿನಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದರು.
ಮಳೆ ಆಧಾರಿತ ಪ್ರದೇಶಗಳ ರೈತರನ್ನು ಗಮನದಲ್ಲಿಟ್ಟುಕೊಂಡು 2014-15ರಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡುವ ಯೋಜನೆಗೆ ಚಾಲನೆ ನೀಡಲಾಯಿತು. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ 30 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು.
ಕೃಷಿ ಇಲಾಖೆ ಮಾಹಿತಿಯಂತೆ ರಾಜ್ಯದ 131 ತಾಲೂಕುಗಳ ಬಡ ರೈತರ ಜಮೀನುಗಳಲ್ಲಿ 2,15,130 ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ ಎಂದು ತಪ್ಪು ಮಾಹಿತಿ ನೀಡಲಾಗಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ರೈತರ ಹಣದಲ್ಲಿ 800 ಕೋಟಿ ರೂ.ಗಳ ಅವ್ಯವಹಾರ ನೆಡೆಸಿರುವ ಈ ಕೃಷಿಭಾಗ್ಯ ಹಗರಣವನ್ನು ಸಿಬಿಐ ತನಿಖೆ ಇಲ್ಲವೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿಗಳು ವಹಿಸಬೇಕು ಎಂದು ಎನ್.ಆರ್.ರಮೇಶ್ ಒತ್ತಾಯಿಸಿದರು.
ಹಗರಣದಲ್ಲಿ ಭಾಗಿಯಾಗಿರುವ ಸಚಿವ ಕೃಷ್ಣಭೆರೇಗೌಡ ಅವರನ್ನು ಸಂಪುಟದಿಂದ ಕೈ ಬಿಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.