ಬೆಂಗಳೂರು, ಜ.3- ಪೇಟಿಯಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ನಲ್ಲಿ ಆನ್ಲೈನ್ ಮುಖಾಂತರ ಗ್ರಾಹಕರು ಉಳಿತಾಯ ಮತ್ತು ಚಾಲ್ತಿ ಖಾತೆ ತೆರೆಯಲು ಭಾರತೀಯ ರೆಸೆರ್ವ್ ಬ್ಯಾಂಕ್ ಒಪ್ಪಿಗೆ ನೀಡಿದೆ.
2019ರ ಕೊನೆ ವೇಳೆಗೆ 10 ಕೋಟಿ ಗ್ರಾಹಕರನ್ನು ಹೊಂದುವುದು ಪೇಟಿಯಂನ ಗುರಿಯಾಗಿದ್ದು, ಈ ಕುರಿತಂತೆ ಇದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಗುಪ್ತ ಮಾತನಾಡಿ, ಪ್ರತಿಯೊಬ್ಬ ಭಾರತೀಯನಿಗೂ ಸಮರ್ಪಕ ಬ್ಯಾಂಕ್ ಸೇವೆ ಒದಗಿಸುವ ಕೆಲಸವನ್ನು ಪೇಟಿಯಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ನಿಮ್ಮ ಬೆರಳ ತುದಿಯಲ್ಲಿ ಈ ಸೇವೆ ಸಿಗುವಂತೆ ಮಾಡುವುದೇ ನಮ್ಮ ಆದ್ಯತೆ ಎಂದು ಹೇಳಿದ್ದಾರೆ.
ಗ್ರಾಹಕರಿಗೆ ಬ್ಯಾಂಕ್ ಸೇವೆಗಳು ಉಚಿತವಾಗಿ ಸಿಗಲಿದ್ದು, ಉಳಿತಾಯ ಖಾತೆ ಮೇಲಿನ ಠೇವಣಿಗೆ ಶೇ.4ರಷ್ಟು ಬಡ್ಡಿ ದೊರೆಯಲಿದ್ದು, ಈ ಖಾತೆಗಳಲ್ಲಿ ಗರಿಷ್ಠ 1 ಲಕ್ಷದವರೆಗೂ ಠೇವಣಿ ಇಡಬಹುದಾಗಿದೆ. ಪೇಟಿಯಂ ಬ್ಯಾಂಕ್ ದೇಶದ ಅತಿದೊಡ್ಡ ಡಿಜಿಟಲ್ ಬ್ಯಾಂಕ್ ಆಗಿದ್ದು, ಗ್ರಾಹಕರಿಗೆ ಜೀರೋ ಬ್ಯಾಲೆನ್ಸ್ ಸೌಲಭ್ಯ ನೀಡುತ್ತಿದೆ. ಡಿಜಿಟಲ್ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಮಾಹಿತಿ ನೀಡಿದರು.