ಕರ್ನಾಟಕದಲ್ಲೂ ಜಾಲ ವಿಸ್ತರಣೆಗೆ ಮುಂದಾದ ರಾಷ್ಟ್ರೀಯ ಮಹಿಳಾ ಪಕ್ಷ

ಬೆಂಗಳೂರು, ಜ.3- ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸುವುದು, ಮಹಿಳಾ ಸಮಾನತೆ ಮತ್ತು ಮಹಿಳಾ ಹಕ್ಕುಗಳ ಸಂರಕ್ಷಣೆಯನ್ನೇ ಪ್ರಧಾನವಾಗಿರಿಸಿಕೊಂಡು ಅಸ್ತಿತ್ವಕ್ಕೆ ಬಂದಿರುವ ನ್ಯಾಷನಲ್ ವುಮೆನ್ಸ್ ಪಾರ್ಟಿ (ರಾಷ್ಟ್ರೀಯ ಮಹಿಳಾ ಪಕ್ಷ) ಇದೀಗ ಕರ್ನಾಟಕದಲ್ಲೂ ತನ್ನ ಜಾಲ ವಿಸ್ತರಣೆ ಮಾಡುವ ಗುರಿ ಹೊಂದಿದೆ.

ಸುದ್ದಿಗೋಷ್ಠಿಯಲ್ಲಿ ನ್ಯಾಷನಲ್ ವುಮೆನ್ಸ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಡಾ.ಶ್ವೇತಾ ಶೆಟ್ಟಿ ಈ ಕುರಿತು ಮಾತನಾಡಿ, ರಾಜಧಾನಿ ದೆಹಲಿಯಲ್ಲಿ ಕಳೆದ ತಿಂಗಳು ಎನ್‍ಡಬ್ಲ್ಯೂಪಿ ಅಸ್ತಿತ್ವಕ್ಕೆ ಬಂದಿದ್ದು, ನಮ್ಮ ಪಕ್ಷದಲ್ಲಿ ಮಹಿಳೆಯರಿಗೆ ಮಾತ್ರ ಸದಸ್ಯರಾಗಲು, ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದರು.

ಪಕ್ಷವನ್ನು ವಿದ್ಯುಕ್ತವಾಗಿ ಶುಭಾರಂಭ ಮಾಡಿದ ಅವರು, ಹಾಲಿ ರಾಜಕೀಯ ಪಕ್ಷಗಳು ಮಹಿಳೆಯರ ಹಕ್ಕುಗಳು ಮತ್ತು ಸಮಾನತೆ ವಿಚಾರಗಳನ್ನು ನಿರ್ಲಕ್ಷಿಸಿವೆ. 545 ಸದಸ್ಯಬಲದ ಲೋಕಸಭೆಯಲ್ಲಿ ಕೇವಲ ಶೇ.11ರಷ್ಟು ಮಾತ್ರ ಮಹಿಳೆಯರಿದ್ದಾರೆ. ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಲು ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡಿಲ್ಲ. ಇದೇ ಉದ್ದೇಶದಿಂದ ಪಕ್ಷ ಸ್ಥಾಪಿಸಲಾಗಿದ್ದು, ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು.

ಸೇನೆ ಸೇರಿದಂತೆ ಎಲ್ಲ ವಲಯಗಳಲ್ಲೂ ಮಹಿಳೆಯರಿರಬೇಕು ಎನ್ನುವುದನ್ನು ನಮ್ಮ ಪಕ್ಷ ಬೆಂಬಲಿಸಲಿದ್ದು, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಹೆಚ್ಚಿನ ಅಧಿಕಾರ ದೊರಕಿಸಿಕೊಡುವ ಉದ್ದೇಶ ಪಕ್ಷದ ಗುರಿಯಾಗಿದೆ ಎಂದು ಹೇಳಿದರು.

ಬೆಂಗಳೂರು ನಗರದ ಎರಡು ಕ್ಷೇತ್ರಗಳು ಒಳಗೊಂಡಂತೆ ರಾಜ್ಯದ 12ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಮಹಿಳಾ ವಕೀಲರು, ಮಹಿಳಾ ಪತ್ರಕರ್ತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುವುದು. ಪಕ್ಷದ ಸಂಘಟನೆಯಲ್ಲಿ ಈ ಜನ ಸಮುದಾಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ರಾಜ್ಯದಲ್ಲಿ ಪಕ್ಷ ಸಂಘಟನೆ ಉದ್ದೇಶದಿಂದ ರೂಪರಾಣಿ ಅವರ ಅಧ್ಯಕ್ಷತೆಯಲ್ಲಿ ಹಂಗಾಮಿ ಸಮಿತಿ ರಚಿಸಿದ್ದು, ಪಕ್ಷದ ಪದಾಧಿಕಾರಿಗಳ ಆಯ್ಕೆ ನಂತರ ಶಾಶ್ವತ ಸಮಿತಿ ರಚಿಸಲಾಗುವುದು. ಮಹಿಳೆಯರ ಸಬಲೀಕರಣವೇ ಪಕ್ಷದ ಪ್ರಮುಖ ಗುರಿಯಾಗಿದೆ ಎಂದು ಡಾ.ಶ್ವೇತಾಶೆಟ್ಟಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ