ಮಹಿಳೆಯರು ತಮ್ಮ ಸಮಸ್ಯೆಗಳನ್ನು ನಿರ್ಭಯವಾಗಿ ಹಂಚಿಕೊಂಡರೆ ಮಾತ್ರ ಪರಿಹಾರ ಪಡೆಯಲು ಸಾಧ್ಯ: ಗೀತಾ ಮೆನನ್

ಬೆಂಗಳೂರು, ಜ.3- ಮಹಿಳೆಯರನ್ನು ಒಂದು ನಿರ್ದಿಷ್ಟ ವಲಯಕ್ಕೆ ಸೀಮಿತಗೊಳಿಸುವುದರಿಂದ ಅವರು ಸಮಾನತೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಸ್ತ್ರೀ ಜಾಗೃತಿ ಸಂಘಟನೆಯ ಕಾರ್ಯದರ್ಶಿ ಗೀತಾ ಮೆನನ್ ತಿಳಿಸಿದರು.

ಗಾಂಧಿಭವನದಲ್ಲಿಂದು ಸ್ವರಾಜ್ ಸಂಘಟನೆ ಆಯೋಜಿಸಿದ್ದ `ನೆಲತಾಯಿ’ ಪುರಸ್ಕಾರ ಸಂಭ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮಹಿಳೆಯರು ತಮಗಿರುವ ಸಮಸ್ಯೆಗಳನ್ನು ನಿರ್ಭಯವಾಗಿ ಹಂಚಿಕೊಂಡರೆ ಮಾತ್ರ ಪರಿಹಾರ ಪಡೆಯಲು ಸಾಧ್ಯ ಎಂದು ಹೇಳಿದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಆತ್ಮವಿಶವಾಸದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಸಮಾನತೆಯ ಹಕ್ಕನ್ನು ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಮಹಿಳೆಯರ ಸ್ವಾಭಾವಿಕ ಋತುಚಕ್ರದ ಆಧಾರದ ಮೇಲೆ ಶಬರಿಮಲೆ ಪ್ರವೇಶ ನಿರಾಕರಿಸುವುದು ಸರಿಯಲ್ಲ. ಆದರೆ, ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರಿಗೆ ದೇಗುಲ ಪ್ರವೇಶ ನಿರಾಕರಿಸುವುದು ಸರಿಯಲ್ಲ. ಪುರುಷರು 41 ದಿನಗಳು ಮಾತ್ರ ಸ್ನಾನ-ಪೂಜೆ, ಮದ್ಯಪಾನ ಮಾಡದೇ ಇರುವುದರಿಂದ ಅವರನ್ನು ಶುದ್ಧರು ಎಂದು ಪರಿಗಣಿಸುವುದು ಎಷ್ಟರ ಮಟ್ಟಿಗೆ ಸರಿ ? ದೇವತೆಗಳಿಗೂ ಸಹ ಋತುಚಕ್ರ ಇರುತ್ತದೆ. ಅವರನ್ನು ಪೂಜೆ ಮಾಡುತ್ತಾರೆ. ಆದರೆ, ಮಹಿಳೆಯರಿಗೆ ಮಾತ್ರ ಈ ಕಟ್ಟುಪಾಡು ಏಕೆ ಎಂದು ಪ್ರಶ್ನಿಸಿದರು.

ದಲಿತರು, ಮಹಿಳೆಯರನ್ನು ಅಪವಿತ್ರರು ಎಂದು ಕರೆಯುವುದು ಸರಿಯಲ್ಲ. ಇಂತಹ ಮೌಢ್ಯದಿಂದ ನಾವು ಹೊರಬರಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಜಿ.ಕೆ.ಪ್ರೇಮ, ರಂಗಭೂಮಿ ಕಲಾವಿದೆ. ಆರ್.ಮಂಗಳಾ, ಹೋರಾಟಗಾರ್ತಿ ಝಾನ್ಸಿರಾಣಿ, ಗಾರ್ಮೆಂಟ್ಸ್ ಮತ್ತು ಟೆಕ್ಸ್‍ಟೈಲ್ಸ್ ಕಾರ್ಮಿಕ ಸಂಘಟನೆಯ ಮುಖ್ಯಸ್ಥೆ ರಾಜೇಶ್ವರಿ, ಹೋರಾಟಗಾರ್ತಿ ಜಯಲಕ್ಷ್ಮಿ ಇವರಿಗೆ 2018ನೇ ನೆಲತಾಯಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಪ್ರಾಧ್ಯಾಪಕಿ ಡಾ.ಎಂ.ಎಸ್.ಆಶಾದೇವಿ, ಗಾಂಧಿಭವನದ ಗೌರವ ಕಾರ್ಯದರ್ಶಿ ಸಂದೀಪ್‍ಚಾಚ್ರ, 2017ರ ನೆಲತಾಯಿ ಪ್ರಶಸ್ತಿ ಪುರಸ್ಕøತರಾದ ನಾಗರತ್ನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ