ಬೆಂಗಳೂರು, ಜ.3- ಸಾಗರ ಸೇರಿದಂತೆ ಇನ್ನಿತರ ಕಡೆ ಮಂಗನ ಕಾಯಿಲೆ ತೀವ್ರಗೊಂಡಿದ್ದು, ಇದುವರೆಗೂ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಈ ಕುರಿತಂತೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಕಾಯಿಲೆ ಹತೋಟಿಗೆ ಕ್ರಮ ವಹಿಸದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವುದಾಗಿ ಶಾಸಕ ಹರತಾಳ ಹಾಲಪ್ಪ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾಲ್ಕು ಮಂದಿ ಕಾಯಿಲೆಗೆ ಬಲಿಯಾಗಿದ್ದಾರೆ. 17 ವರ್ಷದ ಯುವತಿಯೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಏಳು ಮಂದಿ ರೋಗ ಪೀಡಿತರಾಗಿದ್ದಾರೆ. ವಿಧಾನಸಭೆಯಲ್ಲಿ ಈ ಬಗ್ಗೆ ನಾವು ಚರ್ಚೆ ನಡೆಸಿದಾಗಲೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆರೋಪಿಸಿದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೇಳುವವರು, ಕೇಳುವವರು ಇಲ್ಲ. ಅದೊಂದು ದೊಡ್ಡಿಯಂತೆ ಆಗಿದೆ. ಮಂಗನ ಕಾಯಿಲೆಯಿಂದ ಜನ ಆತಂಕಗೊಂಡಿದ್ದಾರೆ. ಸುಳ್ವಾಡಿಯ ವಿಷ ಪ್ರಕರಣಕ್ಕಿಂತ ಇದು ಗಂಭೀರ ಪ್ರಕರಣ. ಕಾರಣ ಅಲ್ಲಿ ಒಬ್ಬರು ವಿಷ ಹಾಕಿದ್ದಾರೆ. ಆದರೆ, ಮಂಗನ ಕಾಯಿಲೆ ವಿರುದ್ಧ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಸರ್ಕಾರವೇ ಜನರ ಸಾವಿಗೆ ಕಾರಣವಾಗುತ್ತದೆ. ರೋಗ ಪತ್ತೆ ಹಚ್ಚಲು ಪುಣೆಗೆ ರಕ್ತದ ಮಾಹಿತಿ ಕಳುಹಿಸಿದರೆ ಅದರ ವರದಿ ಬರಲು ಒಂದು ವಾರ ತಗುಲುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಯ ಸ್ಥಿತಿ ಏನಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಎಲ್ಲ ಅವ್ಯವಸ್ಥೆಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಅಥವಾ ಸಾಗರದಲ್ಲೇ ರೋಗಪತ್ತೆ ಪ್ರಯೋಗಾಲಯ ಆರಂಭಿಸಬೇಕು. ಈ ರೋಗದಿಂದ ನರಳುವವರಿಗಾಗಿ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು. 24 ಗಂಟೆಗಳ ಕಾಲ ಕೆಲಸ ನಿರ್ವಹಿಸುವ ವೈದ್ಯರನ್ನು ಮಂಗನ ಕಾಯಿಲೆ ನಿಯಂತ್ರಣಕ್ಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಪಾಶ್ವನಾಥ್ ಜೈನ್ (45), ಕೃಷ್ಣಪ್ಪ (57), ಮಂಜುನಾಥ್ (22), ಲೋಕರಾಜ್ ಜೈನ್ (28) ಮೃತಪಟ್ಟವರಾಗಿದ್ದು, ಯುವತಿ ಶ್ವೇತಾಜೈನ್ ದೇವರಾಜ್ ಗಂಭೀರ ಸ್ಥಿತಿ ತಲುಪಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಸೋಮವಾರ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಶಾಸಕ ಸಂಜೀವ್ ಮಟಂದೂರು ಉಪಸ್ಥಿತರಿದ್ದರು.