ಬೆಂಗಳೂರು, ಜ.3- ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಗೆ ವರಿಷ್ಠರು ಭರ್ಜರಿ ಸಿದ್ದತೆ ನಡೆಸಿದ್ದಾರೆ.
ಪಕ್ಷದ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನೇತೃತ್ವದಲ್ಲಿ ಚುನಾವಣಾ ಪೂರ್ವ ಸಿದ್ಧತಾ ಸಭೆ ನಡೆಸಲಾಯಿತು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮುಂದುವರೆಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ಮೂರನೇ ಒಂದು ಭಾಗದಷ್ಟು ಸೀಟು ಹಂಚಿಕೆ ಪ್ರಸ್ತಾಪ ಮಾಡುವ ಕುರಿತು ಸಭೆಯಲ್ಲಿ ಕುತೂಹಲ ಕೆರಳಸಿತ್ತು. ಇದಕ್ಕೆ ಕೆಲವರು ದನಿಗೂಡಿಸಿದರು.
ಲೋಕಸಭೆ ಚುನಾವಣೆಗೆ ಅರ್ಹ ಸ್ಪರ್ಧಾಕಾಂಕ್ಷಿಗಳನ್ನು ಕಣಕ್ಕಿಳಿಸಿ ಹೆಚ್ಚಿನ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಪಕ್ಷ ಕೈಗೊಳ್ಳಬೇಕಾದ ಕ್ರಮ ಹಾಗೂ ಪ್ರಣಾಳಿಕೆ ಕುರಿತಂತೆ ವಿಸ್ತೃತವಾದ ಚರ್ಚೆ ನಡೆಯಿತು. ಇದಕ್ಕಾಗಿ ರಾಜ್ಯದ ವಿವಿಧೆಡೆಗಳಿಂದ ಜೆಡಿಎಸ್ನ ಮುಖಂಡರು ಕೂಡ ಆಗಮಿಸಿದ್ದರು.
ಆರಂಭದಲ್ಲಿ ಮಾತನಾಡಿದ ವೈ.ಎಸ್.ವಿ.ದತ್ತ, ಮೈತ್ರಿ ಸರ್ಕಾರದಲ್ಲಿ ಕಾರ್ಯಕರ್ತರಿಗೆ ಆದ್ಯತೆ, ಮಾನ್ಯತೆ ಸಿಗಬೇಕು. ಇದೊಂದು ಸೂಕ್ಷ್ಮ, ನಾಜೂಕಿನ ಸಂದರ್ಭವಾಗಿದ್ದು, ಪಕ್ಷ ಸಂಘಟನೆಯೊಂದಿಗೆ ಎಲ್ಲವನ್ನೂ ಸಮನ್ವಯಗೊಳಿಸಬೇಕಾಗಿದೆ ಎಂದರು.
ವರಿಷ್ಠರ ಮಾರ್ಗದರ್ಶನದಂತೆ ಮುನ್ನಡೆಯಬೇಕು. ಈ ಹಿಂದಿನಂತೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಹಂಬಲ ಇರುವುದು ಸಹಜ. ಹಾಗಾಗಿ ನಮ್ಮದೇ ಆದ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ್ಕುಮಾರ್, ಮಾಜಿ ಸಚಿವ ಹಾಗೂ ನಟ ಅಂಬರೀಶ್, ಸಿ.ಕೆ.ಜಾಫರ್ ಶರೀಫ್, ಮಾಜಿ ಶಾಸಕ ಭಕ್ತವತ್ಸಲಂ, ಉಪ ಮೇಯರ್ ರಮಿಳಾ, ಮಂಡ್ಯ ಜಿಲ್ಲೆ ಪಾಂಡವಪುರ ಬಸ್ ದುರಂತದಲ್ಲಿ ಮಡಿದವರು, ಸೂಲಗಿತ್ತಿ ನರಸಮ್ಮ, ಚಾಮರಾಜನಗರ ಜಿಲ್ಲೆಯಲ್ಲಿ ವಿಷ ಪ್ರಸಾದ ಸೇವನೆಯಿಂದ ಮಡಿದವರು, ಇತ್ತೀಚೆಗೆ ಹತ್ಯೆಯಾದ ಜೆಡಿಎಸ್ ಮುಖಂಡ ಪ್ರಕಾಶ್ ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸ್ಥಳೀಯ ಸಂಸ್ಥೆಗಳು, ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಸಚಿವರಾದ ಬಂಡೆಪ್ಪ ಕಾಶ್ಯಂಪೂರ್, ವೆಂಕಟರಾವ್ ನಾಡಗೌಡ, ಮನುಗುಳಿ, ಶಾಸಕರಾದ ಸುರೇಶ್ ಗೌಡ, ಕೆ.ಎಂ.ಶಿವಲಿಂಗೇಗೌಡ, ಎಚ್.ಕೆ.ಕುಮಾರಸ್ವಾಮಿ, ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ, ವಿಧಾನಪರಿಷತ್ ಸದಸ್ಯರಾದ ರಮೇಶ್ಗೌಡ, ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಕಾರ್ಯಾಧ್ಯಕ್ಷ ನಾರಾಯಣರಾವ್, ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.