ಬೆಂಗಳೂರು,ಜ.3- ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿಗೆ ಒಳಗಾಗಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿಗೆ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ದೊಡ್ಡಹಾಲಹಳ್ಳಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಅವರ ನಿವಾಸಕ್ಕೆ ಐಟಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಬರಬೇಕೆಂದು ಸೂಚಿಸಿದ್ದಾರೆ.
ಇದೇ ರೀತಿ ಕನಕಪುರದಲ್ಲಿರುವ ಮತ್ತೊಂದು ಮನೆಗೂ ನೋಟಿಸ್ ನೀಡಲಾಗಿದ್ದು, ದಿನಾಂಕ ತಿಳಿಸಿದ ನಂತರ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ಕಾರಣ ಅಧಿಕಾರಿಗಳು ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದರಾದ ಡಿ.ಕೆ.ಸುರೇಶ್ ನವದೆಹಲಿಗೆ ತೆರಳಿದರೆ ಮೇಕೆದಾಟು ಕುಡಿಯುವ ನೀರಿನ ಯೋಜನೆ ಕುರಿತಂತೆ ಮಾತುಕತೆ ನಡೆಸಲು ಡಿ.ಕೆ.ಶಿವಕುಮಾರ್ ನಿನ್ನೆ ಅಧಿಕಾರಿಗಳ ಜೊತೆ ಚೆನ್ನೈಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಹೀಗೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ಕೊಟ್ಟಿದ್ದಾರೆ.
2017ರ ಆಗಸ್ಟ್ ತಿಂಗಳಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಸಂಬಂಧಿಕರು ಸೇರಿದಂತೆ ಮತ್ತಿತರ ಕಡೆ ಐಟಿ ತಂಡ ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ ಹಿನ್ನೆಲೆಯಲ್ಲಿ ಕೆಲವು ದಾಖಲೆಗಳನ್ನು ಹಾಗೂ ನಗದು ಪತ್ತೆ ಮಾಡಿತ್ತು.
ನವದೆಹಲಿಯ ಫ್ಲಾಟ್ವೊಂದರಲ್ಲಿ ಶಿವಕುಮಾರ್ಗೆ ಸೇರಿದ್ದು ಎನ್ನಲಾದ ನಗದು ಪತ್ತೆಯಾಗಿದ್ದರಿಂದ ಈ ಪ್ರಕರಣವನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಬೆಂಗಳೂರಿನ ಆರ್ಥಿಕ ಅಪರಾಧ ನ್ಯಾಯಾಲಯದಿಂದ ಶಿವಕುಮಾರ್ಗೆ ಜಾಮೀನು ಮಂಜೂರಾಗಿದೆ.
ಒಂದು ವೇಳೆ ಅವರಿಗೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ್ದರೆ ಐಟಿ ಅಧಿಕಾರಿಗಳು ವಶಕ್ಕೆ ಪಡೆಯುವ ಸಾದ್ಯತೆ ಇತ್ತು. ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿತ್ತು.
ಗುಜರಾತ್ನಲ್ಲಿ ರಾಜ್ಯಸಭಾ ಚುನಾವಣೆ ನಡೆಯುತ್ತಿದ್ದ ವೇಳೆ ಬಿಜೆಪಿ ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆದು ಅಹಮ್ಮದ್ ಪಾಟೀಲ್ ಸೋಲಿಸಲು ಮುಂದಾಗಿತ್ತು. ಇದರ ಸುಳಿವು ಅರಿತ ಹೈಕಮಾಂಡ್ ಎಲ್ಲ ಶಾಸಕರನ್ನು ಬೆಂಗಳೂರಿನ ಈಗಲ್ಟನ್ ರೆಸಾರ್ಟ್ಗೆ ಕಳುಹಿಸಿಕೊಟ್ಟಿತ್ತು.
ಈ ವೇಳೆಯೇ ಐಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಮೇಲೆ ದಾಳಿ ನಡೆಸಿದ್ದರು.