ಪಣಜಿ: ಬಹುಕೋಟಿ ಮೊತ್ತದ ರಾಫೆಲ್ ಹಗರಣದ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ನೀಡಿದ್ದರೂ ಆ ಬಗ್ಗೆ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದಗಳು, ಆರೋಪಗಳು ನಡೆಯುತ್ತಲೇ ಇವೆ. ಇಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿಕೆಯ ಬಗ್ಗೆ ಇರುವ ಆಡಿಯೋ ತುಣುಕು ಬಿಡುಗಡೆ ಮಾಡಿರುವ ಕಾಂಗ್ರೆಸ್ ನಾಯಕರು, ರಫೇಲ್ ಹಗರಣದ ಕುರಿತ ಫೈಲ್ಗಳನ್ನು ಪರಿಕ್ಕರ್ ತಮ್ಮ ಬೆಡ್ರೂಂನಲ್ಲಿ ಇಟ್ಟುಕೊಂಡಿರುವುದಾಗಿ ಅವರೇ ಹೇಳಿದ್ದಾರೆ. ಅದೇ ಕಾರಣಕ್ಕೆ ಪ್ರಧಾನಿ ಮೋದಿ ಸರ್ಕಾರ ಜಂಟಿ ಸಂಸದೀಯ ಸಮಿತಿ ತನಿಖೆಯನ್ನು ನಡೆಸಲು ಅನುಮತಿ ನೀಡುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಭಾರತ ಮತ್ತು ಫ್ರಾನ್ಸ್ ನಡುವೆ 36 ರಫೇಲ್ ಜೆಟ್ಗಳ ಖರೀದಿಯ ಒಪ್ಪಂದ ನಡೆದಾಗ ಮನೋಹರ್ ಪರಿಕ್ಕರ್ ಕೇಂದ್ರ ರಕ್ಷಣಾ ಸಚಿವರಾಗಿದ್ದರು. ಇದೀಗ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿರುವ ಪರಿಕ್ಕರ್ ಕೆಲ ತಿಂಗಳುಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ, ಅವರ ಬದಲಾಗಿ ಬೇರೆಯವರನ್ನು ಗೋವಾ ಸಿಎಂ ಸ್ಥಾನದಲ್ಲಿ ಕೂರಿಸಲಾಗುತ್ತದೆ ಎಂಬ ಮಾತುಗಳೂ ಇತ್ತೀಚೆಗೆ ಕೇಳಿಬರುತ್ತಿವೆ.
ಇದೀಗ, ಸಿಎಂ ಮನೋಹರ್ ಪರಿಕ್ಕರ್ ಮೇಲೆ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್, ಕಳೆದ ವಾರ ನಡೆದ ಗೋವಾ ಸಂಪುಟ ಸಭೆಯಲ್ಲಿ ಮಾತನಾಡುವಾಗ ಪರಿಕ್ಕರ್ ಒಂದು ಅಚ್ಚರಿಯ ಸಂಗತಿಯನ್ನು ಹೇಳಿದ್ದಾರೆ. ತನ್ನನ್ನು ಸಿಎಂ ಸ್ಥಾನದಿಂದ ಯಾರಿಗೂ ಕೆಳಗಿಳಿಸಲು ಸಾಧ್ಯವಿಲ್ಲ. ಏಕೆಂದರೆ ರಫೇಲ್ ಡೀಲ್ಗೆ ಸಂಬಂಧಿಸಿದ ಮುಖ್ಯವಾದ ಫೈಲ್ಗಳು ನನ್ನ ಫ್ಲಾಟ್ನ ಬೆಡ್ರೂಂನಲ್ಲಿವೆ ಎಂದು ಹೇಳಿದ್ದಾರೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಇನ್ನೊಬ್ಬ ಅನಾಮಧೇಯ ವ್ಯಕ್ತಿಯೊಂದಿಗೆ ಮಾತನಾಡಿರುವ ತುಣುಕುಗಳು ಆಡಿಯೋದಲ್ಲಿವೆ ಎಂದು ಸಂಸತ್ ಹೊರಗೆ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ನಾಯಕರು ಬಿಜೆಪಿಗೆ ಶಾಕ್ ನೀಡಿದ್ದಾರೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೆವಾಲ ಈ ಆಡಿಯೋ ತುಣುಕನ್ನು ಬಹಿರಂಗಪಡಿಸಿದ್ದು, ಇಲ್ಲಿ ನಡೆದಿರುವ ಚರ್ಚೆಗಳು ಗುಟ್ಟಾಗಿರಬೇಕು, ಎಲ್ಲೂ ಚರ್ಚಿತವಾಗಬಾರದು ಎಂದು ಸಚಿವ ವಿಶ್ವಜಿತ್ ರಾಣೆ ಹೇಳಿರುವುದು ಕೂಡ ರೆಕಾರ್ಡ್ ಆಗಿದೆ. ಈ ವಿಷಯ ಸದ್ಯಕ್ಕೀಗ ಬಿಜೆಪಿ ನಾಯಕರಿಗೆ ತಲೆನೋವು ತಂದಿಟ್ಟಿದೆ. ರಫೇಲ್ ಹಗರಣದಲ್ಲಿ ಬಿಜೆಪಿ ನಾಯಕರ ಕೈವಾಡವಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ಗೆ ಸುಪ್ರೀಂಕೋರ್ಟ್ ತೀರ್ಪಿನಿಂದ ಭಾರೀ ಮುಖಭಂಗವಾಗಿತ್ತು. ಇದೀಗ, ರಫೆಲ್ ಹಗರಣದ ಬಗ್ಗೆ ಬಿಜೆಪಿ ನಾಯಕರು ಚರ್ಚಿಸುತ್ತಿರುವ ಆಡಿಯೋ ತುಣುಕು ಕಾಂಗ್ರೆಸ್ ನಾಯಕರ ಕೈಗೆ ಸಿಕ್ಕಿರುವುದು ಮತ್ತೊಂದು ತಲೆನೋವು ತಂದಿಟ್ಟಂತಾಗಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಸರ್ಜೆವಾಲ, ವಿದೇಶಾಂಗ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ರಫೇಲ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ತಮ್ಮ ಬೆಡ್ರೂಂನಲ್ಲಿ ಇಟ್ಟುಕೊಂಡಿದ್ದಾರೆ. ಆ ಕಡತಗಳಲ್ಲಿ ಒಪ್ಪಂದದ ಬಗ್ಗೆ ಮಹತ್ವದ ಸಾಕ್ಷಿಗಳು ಇರಬಹುದು. ಆ ಫೈಲ್ಗಳನ್ನು ಯಾಕೆ ಮುಚ್ಚಿಡಲಾಗುತ್ತಿದೆ? ನಮಗೆ ಸತ್ಯ ಗೊತ್ತಾಗಲೇಬೇಕು. ಕಾಯುವವನೇ ಕಳ್ಳ ಎಂಬುದು ಮತ್ತೆ ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.
ಇನ್ನು, ಆ ಆಡಿಯೋದಲ್ಲಿರುವ ಧ್ವನಿ ರಾಣೆ ಅವರದ್ದೇ ಹೌದಾ? ಎಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ. ಆಡಿಯೋದಲ್ಲಿರುವ ಇನ್ನೋರ್ವ ವ್ಯಕ್ತಿ ಯಾರು ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ. ಆದರೆ, ರಾಣೆ ಅವರು ಹೇಳಿದ ಈ ವಿಷಯವನ್ನು ಕೇಳಿದ ಆ ವ್ಯಕ್ತಿ, ‘ಓಹ್ ಮೈ ಗಾಡ್!, ನೀವು ಏನು ಹೇಳ್ತಾ ಇದೀರಾ?’ ಎಂದು ಆಶ್ಚರ್ಯಚಕಿತರಾಗಿ ಕೇಳುತ್ತಿರುವುದು ಆಡಿಯೋದಲ್ಲಿ ರೆಕಾರ್ಡ್ ಆಗಿದೆ.
ಸುಪ್ರೀಂಗೆ ಕಾಂಗ್ರೆಸ್ ಮೇಲ್ಮನವಿ:
ಕಳೆದ ತಿಂಗಳು ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ಅಕ್ರಮ ನಡೆದಿದೆ ಎಂದು ಸಲ್ಲಿಸಲಾಗಿದ್ದ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ವಿಷಯದಲ್ಲಿ ಅನುಮಾನ ಪಡಲು ಯಾವುದೇ ಕಾರಣಗಳಿಲ್ಲ ಎಂದು ಕೋರ್ಟ್ ಹೇಳಿತ್ತು. ಇದರಿಂದ ಕಾಂಗ್ರೆಸ್ಗೆ ಹಿನ್ನಡೆಯಾಗಿತ್ತು.
ಇನ್ನು, ಕಳೆದ ತಿಂಗಳು ಸುಪ್ರೀಂಕೋರ್ಟ್ ನೀಡಲಾಗಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಮಾಜಿ ಕೇಂದ್ರ ಸಚಿವರಾದ ಯಶವಂತ ಸಿನ್ಹಾ, ಅರುಣ್ ಶೌರಿ ಇಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಕೇಂದ್ರ ಸರ್ಕಾರದ ಸಹಿ ಇಲ್ಲದ ಮುಚ್ಚಿದ ಲಕೋಟೆಯಲ್ಲಿ ನೀಡಿದ್ದ ತಪ್ಪು ಮಾಹಿತಿಗಳ ಆಧಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆದ್ದರಿಂದ ತೀರ್ಪನ್ನು ಮರು ಪರಿಶೀಲನೆ ನಡೆಸಿ ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದಾರೆ.