ಬೆಳಗಾವಿ, ಜ.2- ಸಮ್ಮಿಶ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸಂಪುಟದಿಂದ ಕೈಬಿಟ್ಟ ಪರಿಣಾಮ ಪಕ್ಷದ ಮುಖಂಡರು, ಮಾಧ್ಯಮ ಹಾಗೂ ಸ್ನೇಹಿತರ ಕೈಗೆ ಸಿಗದೆ ಇರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸ್ನೇಹಿತರೊಬ್ಬರು ಬರೆದಿರುವ ಪತ್ರ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗಿದೆ.
ವಾಟ್ಸಾಪ್ ಮೂಲಕ ವೈರಲ್ ಆಗಿರುವ ಪತ್ರದಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿರುವ ಸ್ನೇಹಿತ, ನಿಮ್ಮ ನೇರಮಾತು, ನಿಷ್ಕಪಟ ನಡೆಯನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ಎಂಟು ದಿನಗಳಿಂದ ನಮ್ಮೆಲ್ಲರಿಂದ ದೂರ ಉಳಿದಿರುವುದು ಸರಿಯಲ್ಲ. ನಿಮ್ಮನ್ನು ಹುಡುಕಿ ಸಾಕಾಗಿದೆ ಎಂದು ಅಶೋಕ್ ಚಂದರಗಿ ಎಂಬವರು ಪತ್ರ ಬರೆದಿದ್ದಾರೆ.
ನೀವು ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷದಲ್ಲಾದರೂ ಇರಿ. ಆದರೆ ಸದಾ ನಮ್ಮ ಕಣ್ಣು ಮುಂದೆಯೇ ಇರಿ. ರಮೇಶ್ ಜಾರಕಿಹೊಳಿ ಎಂದೂ ನಿಂತ ನೀರಲ್ಲ. ನಿಮ್ಮ ದೀರ್ಘ ಕಾಲದ ಕಣ್ಮರೆ ನಮಗಷ್ಟೇ ಅಲ್ಲ. ನಿಮ್ಮಿಂದ ದೂರ ಸರಿದವರಿಗೆ ಎಲ್ಲರಿಗೂ ದುಃಖ ಉಂಟು ಮಾಡಿದೆ. ತಾವು ಎಲ್ಲಿದ್ದರೂ ಬೆಳಗಾವಿಗೆ ಮರಳಿ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಗಂಡು ಮೆಟ್ಟಿನ ನಾಡು. ನಾವು ಅಡಗಿ ಕುಳಿತುಕೊಳ್ಳುವ ಬೆಕ್ಕುಗಳಲ್ಲ. ಘರ್ಜಿಸುವ ಸಿಂಹಗಳು ಇದ್ದ ಹಾಗೆ ಎಂದು ರಮೇಶ್ ಅವರ ಸ್ನೇಹಿತ ಅಶೋಕ್ ಪತ್ರ ಬರೆದು ಬೆನ್ನಿಗೆ ನಿಂತಿದ್ದಾರೆ.