ಪಕ್ಷ ಸಂಘಟನೆ ಮತ್ತು ಲೋಕಸಭೆ ಚುನಾವಣೆ ಸಿದ್ಧತೆ ವಿಚಾರ ನಾಳೆ ಮಹತ್ವದ ಸಭೆ ನಡೆಸಲಿರುವ ಜೆಡಿಎಸ್

ಬೆಂಗಳೂರು, ಜ.2-ಮುಂಬರುವ ಲೋಕಸಭೆ ಚುನಾವಣೆ ಸಿದ್ಧತೆ, ಪಕ್ಷದ ಸಂಘಟನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನಾಳೆ ಜೆಡಿಎಸ್ ಮಹತ್ವದ ಸಭೆ ನಡೆಯಲಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಪಕ್ಷದ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಸಭೆ ನಡೆಯಲಿದೆ.ಸಭೆಯಲ್ಲಿ ಮುಂದಿನ ಲೋಕಸಭೆ ಚುನಾವಣೆ ಸಿದ್ಧತೆ, ಕಾಂಗ್ರೆಸ್‍ನೊಂದಿಗೆ ಚುನಾವಣಾ ಪೂರ್ವ ಸೀಟು ಹಂಚಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ತಯಾರಿ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಸೇರಿದಂತೆ ಜೆಡಿಎಸ್‍ನ ಸಚಿವರು, ವಿಧಾನಸಭೆ, ವಿಧಾನಪರಿಷತ್ ಸದಸ್ಯರು, ವಿವಿಧ ಪದಾಧಿಕಾರಿಗಳು, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೂ ಸಭೆಗೆ ಆಹ್ವಾನ ನೀಡಲಾಗಿದೆ.
ಸಭೆಯಲ್ಲಿ ಚುನಾವಣೆ ಸಿದ್ಧತೆಯಲ್ಲದೆ, ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆ, ರಾಜ್ಯ ಕಾರ್ಯಾಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳ ನೇಮಕ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆದು ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ಲೋಕಸಭೆ ಚುನಾವಣೆಗೆ ಈಗಿನಿಂದಲೇ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ವಿವಿಧ ಸಭೆಗಳನ್ನು ನಡೆಸುವುದು ಹಾಗೂ ರಾಜ್ಯ ಪ್ರವಾಸ ಕೈಗೊಳ್ಳುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ.

ಕಾಂಗ್ರೆಸ್ ಪಕ್ಷದೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮುಂದುವರೆಸುವ ಬಗ್ಗೆಯೂ ಪಕ್ಷದ ಮುಖಂಡರು ಹಾಗೂ ಸಚಿವರು, ಶಾಸಕರ ಅಭಿಪ್ರಾಯವನ್ನು ಗೌಡರು ಪಡೆಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ