ಬೆಂಗಳೂರು, ಜ.2-ಕುರುಬ ಸಮುದಾಯದ ಸಾಂಸ್ಕøತಿಕ ಇತಿಹಾಸವನ್ನು 15 ಸಂಪುಟಗಳ ಬೃಹತ್ ಮಾಲಿಕೆಯಲ್ಲಿ ಹೊರ ತರುತ್ತಿದ್ದು, ಮೊದಲ ಹಂತದಲ್ಲಿ 10 ಸಂಪುಟಗಳ 13 ಗ್ರಂಥಗಳನ್ನು ಜ.5 ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಕುರುಬರ ಸಾಂಸ್ಕøತಿಕ ಪರಿಷತ್ನ ಅಧ್ಯಕ್ಷರಾದ ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕುರುಬರ ಸಾಂಸ್ಕøತಿಕ ಪರಿಷತ್, ಕುರುಬರ ಸಂಸ್ಕøತಿ ದರ್ಶನ ಮಾಲಿಕೆಯಡಿ ಯಾವುದೇ ಲಾಭ-ನಷ್ಟವಿಲ್ಲದೆ ಈ ಗ್ರಂಥಗಳನ್ನು ಹೊರತರುತ್ತಿದೆ ಎಂದರು.
ಸಮುದಾಯದ ಸಮಗ್ರ ಮಾಹಿತಿಯನ್ನು ದಾಖಲಿಸುವ ಮಹತ್ವಾಕಾಂಕ್ಷಿಯ ದೂರಗಾಮಿ ಐತಿಹಾಸಿಕ ಯೋಜನೆ ಇದಾಗಿದ್ದು, ಸಾಂಸ್ಕøತಿಕ ಲೋಕದಲ್ಲಿ ವಿಶಿಷ್ಟವಾದ ವಿನೂತನ ಪ್ರಯತ್ನವಾಗಿದೆ. ಸಮುದಾಯವೊಂದರ ಸಮಗ್ರವಾದ ಸಮಾಜೋ-ಸಾಂಸ್ಕøತಿಕ ಮಾಹಿತಿಯನ್ನು ವಿಷಯವಾರು ವಿಂಗಡಿಸಿ ವಿಸ್ತೃತವಾಗಿ ಪ್ರಕಟಿಸುವ ನಿಟ್ಟಿನಲ್ಲಿ ಇದೊಂದು ಪ್ರಥಮ ಪ್ರಯತ್ನವಾಗಿದೆ ಎಂದರು.
ಮೊದಲ ಹಂತದಲ್ಲಿ 13 ಗ್ರಂಥಗಳು ಪ್ರಕಟವಾಗುತ್ತಿದ್ದು, ಕುರುಬರ ಸಂಸ್ಕøತಿ ದರ್ಶನ ಎಂಬ ಈ ಯೋಜನೆಗೆ ಹಲವು ವಿದ್ವಾಂಸರು, ವಿಷಯ ತಜ್ಞರು, ಕ್ಷೇತ್ರ ಸಹಾಯಕರು ನೆರವಾಗಿದ್ದಾರೆ. 10 ವರ್ಷಗಳ ಪ್ರಯತ್ನದ ಫಲವಾಗಿ ಮೊದಲ ಕಂತಿನಲ್ಲಿ ಕುರುಬರ ಪುರಾಣ, ಇತಿಹಾಸ, ಧರ್ಮ, ಸಾಹಿತ್ಯ, ಕಲೆ, ಕ್ರೀಡೆ, ಮಹಿಳೆ, ಸಮಾಜೋ-ಆರ್ಥಿಕ, ಆಧುನಿಕತೆ, ಚಿತ್ರಕೋಶ, ಸಾಂಸ್ಕøತಿಕ ಪದಕೋಶ ಎಂಬ 10 ಸಂಪುಟಗಳ 13 ಗ್ರಂಥಗಳು ಬಿಡುಗಡೆಯಾಗಲಿವೆ.
ಉಳಿದ ಸಂಸ್ಕøತಿ, ಶಿಕ್ಷಣ, ರಾಜಕೀಯ, ಕಳ್ಳುಬಳ್ಳಿ, ಭಾಷೆ ಕುರಿತ ಗ್ರಂಥಗಳು ಮುಂದಿನ ಕಂತಿನಲ್ಲಿ ಪ್ರಕಟವಾಗಲಿವೆ. ಲಾಭ-ನಷ್ಟವಿಲ್ಲದ ಆಧಾರದ ಮೇಲೆ ಗ್ರಂಥಗಳ ಬೆಲೆ ನಿಗದಿಪಡಿಸಿದ್ದು, 13 ಗ್ರಂಥಗಳ ಮುಖಬೆಲೆ 4640 ರೂ.ಗಳಾಗಿದೆ.ಪ್ರಕಟಣಾಪೂರ್ವದಲ್ಲಿ ಇಡೀ ಸಂಪುಟಗಳನ್ನು ಮುಂಗಡವಾಗಿ ಕಾಯ್ದಿರಿಸುವ ಹಾಗೂ ಬಿಡುಗಡೆ ದಿನ ಖರೀದಿಸುವವರಿಗೆ 3500 ರೂ.ರಿಯಾಯ್ತಿ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.
ಕುರುಬರ ಸಂಸ್ಕøತಿ ದರ್ಶನ ಮಾಲಿಕೆಯ 13 ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ಜ.5 ರಂದು ಸಂಜೆ 5ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಂಥಗಳ ಲೋಕಾರ್ಪಣೆ ಮಾಡಲಿದ್ದು, ಹಿರಿಯ ಸಾಹಿತಿ ಡಾ.ಹಂಪಾ ನಾಗರಾಜಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ. ಕೃತಿಗಳ ಲೋಕಾರ್ಪಣೆ ಸಂದರ್ಭದಲ್ಲಿ ಕನಕ ಕಾವ್ಯ ವೈಭವ ಎಂಬ ಕನಕ ಕೀರ್ತನೆಗಳ ನೃತ್ಯರೂಪಕದ ಪ್ರದರ್ಶನ ಏರ್ಪಡಿಸಲಾಗುತ್ತದೆ.ಅಲ್ಲದೆ, ಕನಕದಾಸರ ಜೀವನ, ಹೋರಾಟ, ತಿಮ್ಮಪ್ಪನಿಂದ ಕನಕದಾಸರಾದ ಪರಿವರ್ತನಾಶೀಲ ಘಟ್ಟಗಳು, ದಾಸತ್ವ ಮೊದಲಾದ ವಿಶೇಷತೆ ನೃತ್ಯರೂಪದಲ್ಲಿರುತ್ತದೆ ಎಂದು ಹೇಳಿದರು.
ಅಲ್ಲದೆ, ಶಾಲಾ ಮಕ್ಕಳಿಂದ ಹರಿ ಭಕ್ತಸಾರ ಆಯ್ದ ಪದ್ಯಗಳ ಗಮಕ ವಾಚನವೂ ಇರುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕುರುಬರ ಸಾಂಸ್ಕøತಿಕ ಪರಿಷತ್ನ ಪ್ರಧಾನ ಕಾರ್ಯದರ್ಶಿ ಡಾ.ಬಿ.ಕೆ.ರವಿ, ಯೋಜನಾ ನಿರ್ದೇಶಕ ಕಾ.ತ. ಚಿಕ್ಕಣ್ಣ, ಪರಿಷತ್ನ ಸದಸ್ಯ ಆನಂದ್ಕುಮಾರಿ ಉಪಸ್ಥಿತರಿದ್ದರು.