ಬೆಂಗಳೂರು,ಜ.2- ಸಾರಿಗೆ ಪ್ರಯಾಣಿಕ ವಾಹನಗಳಿಗೆ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಜಿಪಿಆರ್‍ಎಸ್ ಮತ್ತು ತುರ್ತು ಗಾಬರಿ ಗುಂಡಿಗಳನ್ನು ಅಳವಡಿಸಲಾಗುತ್ತಿದೆ ಎಂದು ಸಾರಿಗೆ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.
ಯಶವಂತಪುರದಲ್ಲಿ ಈ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಇದರಿಂದ ಪ್ರಯಾಣಿಕರಿಗೆ ಯಾವುದೇ ರೀತಿಯ ಕಿರಿಕಿರಿಯಾದರೆ ತಕ್ಷಣವೇ ಗುಂಡಿಯನ್ನು ಒತ್ತಿದ್ದಲ್ಲಿ ಕೇಂದ್ರ ನಿಯಂತ್ರಣ ಕೊಠಡಿಗೆ ಸಂದೇಶವು ತಲುಪಿ ವಾಹನಗಳ ವಿವರಗಳು ಮತ್ತು ಅದು ಇರುವ ಸ್ಥಳದ ಬಗ್ಗೆ ಮಾಹಿತಿಯನ್ನು ಕೇಂದ್ರ ನಿಯಂತ್ರಣ ಕೊಠಡಿಯಲ್ಲಿ ಪರಿಶೀಲಿಸಿ ಪ್ರವರ್ತನಾ ಸಿಬ್ಬಂದಿಯವರನ್ನು ಸೂಕ್ತ ರಕ್ಷಣೆ ಮತ್ತು ಪರಿಹಾರದ ಬಗ್ಗೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.
ಇಂತಹದ್ದೊಂದು ಯೋಜನೆ ಕರ್ನಾಟಕದಲ್ಲೇ ಮೊದಲು. ಹೊಸ ಸಾರಿಗೆ ವಾಹನಗಳಲ್ಲಿ ಇವುಗಳನ್ನು ಅಳವಡಿಸಲಾಗುತ್ತಿದ್ದು, ಹಳೆಯ ವಾಹನಗಳಿಗೆ ಇವುಗಳನ್ನು ಅಳವಡಿಸಬೇಕೆ, ಬೇಡವೇ ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ನಿರ್ಭಯಾ ಅನುದಾನ ಸದ್ಭಳಕೆ:
ಕೇಂದ್ರ ಸರ್ಕಾರದಿಂದ 33ಸಾವಿರ ಕೋಟಿ ಬಿಡುಗಡೆಯಾಗಿದೆ.ನಿಲ್ದಾಣಗಳಲ್ಲಿ ಹಾಲುಣಿಸುವ ಕೇಂದ್ರ ಸ್ಥಾಪನೆ ಸೇರಿದಂತೆ ಮಹಿಳೆಯರ ಸುರಕ್ಷತೆಗೆ ಅಗತ್ಯ ಸೌಕರ್ಯಗಳನ್ನು ನೀಡಲು ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲಾಗುವುದು ಎಂದರು.
ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ:
ಬಸ್ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ ಎಂದು ಇದೇ ಸಂದರ್ಭದಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.
ತೈಲ ಬೆಲೆ ಏರಿಕೆಯ ಪರಿಣಾಮ ಬಸ್ ಪ್ರಯಾಣ ದರ ಏರಿಕೆಗೆ ಚಿಂತನೆ ನಡೆಸಲಾಗಿತ್ತು. ಇದೀಗ ತೈಲ ಬೆಲೆ ಇಳಿಕೆಯಿಂದ ಬಸ್ ಪ್ರಯಾಣ ದರ ಏರಿಕೆ ಮಾಡಬೇಕೋ ಬೇಡವೋ ಎಂಬುದನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ ಎಂದರು.
ಮೇಜರ್ ಸರ್ಜರಿ:
ಸಾರಿಗೆ ಇಲಾಖೆಗೆ ಇನ್ನೆರಡು ತಿಂಗಳಲ್ಲಿ ಭರ್ಜರಿ ಸರ್ಜರಿ ನಡೆಸಲಾಗುವುದು.ದಕ್ಷ, ಪ್ರಾಮಾಣಿಕ ಅಧಿಕಾರಿಗಳ ತಂಡದೊಂದಿಗೆ ಸಾರಿಗೆ ಇಲಾಖೆಯನ್ನು ಮಾದರಿ ಇಲಾಖೆಯನ್ನಾಗಿಸಲು ಮುಂದಾಗುವುದಾಗಿ ಭರವಸೆ ನೀಡಿದರು.