ಜ.6ರಂದು ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿರುವ 16ನೇ ಚಿತ್ರಸಂತೆ

ಬೆಂಗಳೂರು,ಜ.2- ಕರ್ನಾಟಕ ಚಿತ್ರಕಲಾ ಪರಿಷತ್ತಿನ 16ನೇ ಚಿತ್ರಸಂತೆ ಜ.6ರಂದು ಕುಮಾರಕೃಪಾ ರಸ್ತೆ ಮತ್ತು ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆಯಲಿದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷದ ರಾಷ್ಟ್ರಪತಿ ಮಹಾತ್ಮ ಗಾಂಧಿಯವರ 150ನೇ ಜನ್ಮವರ್ಷವಾಗಿರುವುದರಿಂದ ಚಿತ್ರಸಂತೆಯನ್ನು ಅವರಿಗೇ ಸಮರ್ಪಣೆ ಮಾಡಲಾಗಿದೆ ಎಂದರು.

ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು ಗಾಂಧಿಯವರ ಕುರಿತಾಗಿಯೇ ಸಂಪೂರ್ಣ ಆವರಣವನ್ನು ಗಾಂಧೀಮಯವಾಗಿಸಲಿದ್ದಾರೆ.

ಚಿತ್ರಸಂತೆಯಲ್ಲಿ 1500 ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಇದೇ ಸಂದರ್ಭದಲ್ಲಿ ನೀಲಾ ಪಂಚ್, ಜೆ.ಎಂ.ಎಸ್.ಮಣಿ ಮತ್ತು ಜಸು ರಾವಲ್ ಅವರಿಗೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.

ಈ ಬಾರಿ 4 ಲಕ್ಷಕ್ಕೂ ಅಧಿಕಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಹಿನ್ನೆಲೆ ಚಿತ್ರ ಸಂತೆಗೆ ಆಗಮಿಸುವವರಿಗೆ ಪಾರ್ಕಿಂಗ್ ವ್ಯವಸ್ಥೆಗೆ ತೊಂದರೆಯಾಗಲಿದೆ. ಹಾಗಾಗಿ ಸಾರ್ವಜನಿಕರು ಸುಗಮ ಸಾರಿಗೆಯನ್ನೇ ಅವಲಂಬಿಸುವಂತೆ ಕೋರಿದ್ದಾರೆ.

ಈ ಸಂದರ್ಭದಲ್ಲಿ ಪರಿಷತ್ ಪದಾಧಿಕಾರಿಗಳಾದ ಪದ್ಮನಾಭ, ಟಿ.ಪ್ರಭಾಕರ್, ರಾಮಕೃಷ್ಣ, ಸತ್ಯನಾರಾಯಣ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ