ಬಂಗಾರಪೇಟೆ, ಜ.2- ಅಧಿಕಾರಿಗಳ ಅನುಮತಿಯನ್ನೂ ಪಡೆಯದೇ ಹೊಸ ವರ್ಷದ ಹುಮ್ಮಸ್ಸಿನಲ್ಲಿ ಶಿಕ್ಷಕ ವೃಂದ ಶಾಲಾ ಮಕ್ಕಳನ್ನು ಲಗ್ಗೇಜ್ಆಟೋದಲ್ಲಿ ಪಿಕ್ನಿಕ್ ಕರೆದುಕೊಂಡು ಹೋಗಿದ್ದ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಡ್ಯಾಂಗೆ ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ತಾಲ್ಲೂಕಿನ ಕಾವರನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಆಕಾಶ್ (12) ಮೃತಪಟ್ಟಿರುವ ದುರ್ಧೈವಿ.
ಹೊಸ ವರ್ಷದ ಪ್ರಯುಕ್ತ ಹಿರಿಯ ಅಧಿಕಾರಿಗಳ ಅನುಮತಿಯೂ ಪಡೆದುಕೊಳ್ಳದೆ ಡ್ಯಾಂ ವೀಕ್ಷಣೆಗೆಂದು ಸುಮಾರು 15 ಕ್ಕೂ ಹೆಚ್ಚು ಮಕ್ಕಳನ್ನು ಲಗ್ಗೇಜ್ ಆಟೋದಲ್ಲಿ ಕರೆದು ಕೊಂಡು ಶಿಕ್ಷಕಿಯರು ಕರೆದುಕೊಂಡು ಹೋಗಿದ್ದರು.
ಆಂಧ್ರಪ್ರದೇಶ ವ್ಯಾಪ್ತಿಗೆ ಬರುವ ಗುಡಿವಂಕದಲ್ಲಿರುವ ಶ್ರೀ ಸುಭ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಶಾಲೆಯ ಉಸ್ತುವಾರಿ ಮುಖ್ಯ ಶಿಕ್ಷಕಿ ಜಗದೀಶ್ವರಿ ಮತ್ತು ಶಿಕ್ಷಕಿ ಕಮಲಮ್ಮ ಅವರು ಶಾಲೆಯ ಮಕ್ಕಳನ್ನು ಲಗ್ಗೇಜ್ ಆಟೋದಲಿ ್ಲಕರೆದುಕೊಂಡು ಹೋಗಿದ್ದರು.
ದೇವಸ್ಥಾನವನ್ನು ನೋಡಿಕೊಂಡು ವಾಪಸ್ ಬರುವಾಗ ತೊಪ್ಪನಹಳ್ಳಿ ಗ್ರಾಮದ ಸಮೀಪ ಇರುವ ಮುಷ್ಠರಹಳ್ಳಿ ಡ್ಯಾಂ ವೀಕ್ಷಣೆಗೆ ಹೋಗಿದ್ದ ಸಮಯದಲ್ಲಿ ವಿದ್ಯಾರ್ಥಿ ಆಕಾಶ್ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ.
ಹೊಸವರ್ಷ ಆಚರಣೆಗೆ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿಲ್ಲ.ಸರ್ಕಾರಿ ಸಮಯದ ಮಧ್ಯೆ ಪಿಕ್ನಿಕ್ ಹೋಗಲು ಅಧಿಕಾರಿಗಳು ಅನುಮತಿ ನೀಡಿಲ್ಲ. ಆದರೂ ಶಿಕ್ಷಕಿಯರು ಮಕ್ಕಳನ್ನು ದೂರದ ಸ್ಥಳಗಳಿಗೆ ಪಿಕಿನಿಕ್ ಕರೆದುಕೊಂಡು ಹೋಗಿ ವಿದ್ಯಾರ್ಥಿ ಸಾವಿಗೆ ಕಾರಣರಾದರಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಕೆಜಿಎಫ್ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಶಾಲೆಯ ಶಿಕ್ಷಕರು ಮಕ್ಕಳನ್ನು ಶಾಲೆಯಿಂದ ಹೊರಗಡೆ ಕರೆದುಕೊಂಡು ಹೋಗಬಹುದೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿದ್ದು, ಇದಕ್ಕೆ ಕಾರಣಕರ್ತರಾದವರ ವಿರುದ್ದ ಕೂಡಲೆ ಕಾನೂನು ಕ್ರಮವನ್ನು ಜರುಗಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಾಮಸಮುದ್ರಂ ಪೊಲೀಸ್ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪಿಎಸ್ಐ ರವಿಕುಮಾರ್ ನೇತೃತ್ವದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.