ಕನ್ನಡ ಶಾಲೆಗಳನ್ನು ಮುಚ್ಚಿ ಇಂಗ್ಲೀಷ್ ಶಾಲೆಗಳನ್ನು ತೆರೆಯುತ್ತಿರುವುದು ಕನ್ನಡಕ್ಕೆ ಮಾಡುತ್ತಿರುವ ದ್ರೋಹ, ವಾಟಾಳ್ ನಾಗರಾಜ್

ಬೆಂಗಳೂರು, ಜ.1- ಕನ್ನಡ ಶಾಲೆಗಳನ್ನು ಮುಚ್ಚಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿರುವುದು ಕನ್ನಡಕ್ಕೆ ಮಾಡುತ್ತಿರುವ ಮಹಾದ್ರೋಹ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಿರಬೇಕು, ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು, ಕನ್ನಡ ಭಾಷೆ ಮಾಧ್ಯಮವಾಗಿರಬೇಕು, ಗ್ರಾಮೀಣ ಶಾಲೆಗಳನ್ನು ಅಭಿವೃದ್ಧಿ ಮಾಡಿ ಉತ್ತಮ ಶಿಕ್ಷಣ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.

ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಹೊಸ ವರ್ಷಾಚರಣೆ ದಿನವಾದ ಇಂದು ನಾಡತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಶಿಕ್ಷಣ ನೀತಿಗೆ ವಿರುದ್ಧವಾಗಿದೆ. ಬಡವರಿಗೆ ಮಾತ್ರ ಕನ್ನಡ, ಶ್ರೀಮಂತರಿಗೆ ಇಂಗ್ಲಿಷ್ ಎಂದು ಸರ್ಕಾರವೇ ತಾರತಮ್ಯ ಮಾಡಲು ಮುಂದಾಗಿದೆ. ಎಲ್ಲರಿಗೂ ಉತ್ತಮ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು. ಇಂಗ್ಲಿಷ್ ಶಾಲೆಗಳನ್ನು ತೆರೆಯಲು ಮುಂದಾಗಿರುವುದು ಕನ್ನಡಕ್ಕೆ ಅಪಾಯ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಭಾಷೆಯಲ್ಲಿ ಬಡವ, ಶ್ರೀಮಂತ ಎಂಬ ಭೇದ-ಭಾವ ಕಲ್ಪಿಸಬಾರದು. ತಮಿಳುನಾಡಿನಲ್ಲಿ ಬ್ಯಾಂಕ್ ವಹಿವಾಟು, ನ್ಯಾಯಾಲಯದ ಕಲಾಪಗಳು ನಾಡಭಾಷೆಯಲ್ಲಿಯೇ ನಡೆಯುತ್ತವೆ. ಆದರೆ, ನಮ್ಮಲ್ಲಿ ನಮ್ಮ ಭಾಷೆಯ ಬಗ್ಗೆ ಕೀಳರಿಮೆ ಇದೆ. ಇದನ್ನು ವಿರೋಧಿಸಿ ವರ್ಷವಿಡೀ 150ಕ್ಕೂ ಹೆಚ್ಚು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಬೆಂಗಳೂರಿನ ಕೈಗಾರಿಕೆಗಳಲ್ಲಿ ಸಾಫ್ಟ್‍ವೇರ್ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಕನ್ನಡ ಚಿತ್ರಗಳು ಪ್ರದರ್ಶನವಾಗಬೇಕು. ಈ ಮೂಲಕ ಕನ್ನಡ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ