ಬೆಂಗಳೂರು, ಜ.1- ಕಳೆದ 2017ನೇ ವರ್ಷಕ್ಕೆ ಹೋಲಿಸಿದರೆ 2018ರಲ್ಲಿ ಅಪರಾಧ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು ಪ್ರಸಕ್ತ ವರ್ಷ ಇದನ್ನು ಶೇ.40ಕ್ಕೆ ಇಳಿಸೋಣ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ಕುಮಾರ್ ತಿಳಿಸಿದ್ದಾರೆ.
ಹೊಸ ವರ್ಷದ ಆರಂಭದ ದಿನವಾದ ಇಂದು ಆಯುಕ್ತರ ಕಚೇರಿಯಲ್ಲಿ ಇನ್ಸ್ಪೆಕ್ಟರ್ ಹಾಗೂ ಉನ್ನತ ಅಧಿಕಾರಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿ ಅವರು ಮಾತನಾಡಿದರು.
ಕಳೆದ ವರ್ಷ ಮಾದಕ ವಸ್ತು ಸೇವನೆ ತಡೆಗೆ ನಾವು ಮಾಡಿದ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಈಗಲೂ ಮುಂದುವರಿಸೋಣ ಎಂದು ಹೇಳಿದರು. ಕಳೆದ ಮೂರು ತಿಂಗಳ ಹಿಂದೆ ಸಿಸಿಬಿ ಮುಖ್ಯಸ್ಥರಾಗಿ ಅಲೋಕ್ಕುಮಾರ್ ಅಧಿಕಾರ ವಹಿಸಿಕೊಂಡ ಮೇಲೆ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಮಾದಕ ವಸ್ತುಗಳ ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈಗ ಹೊಸದಾಗಿ ಠಾಣೆಗಳಿಗೆ ಒಂದು ಸಾವಿರ ಬೈಕ್ಗಳನ್ನು ನೀಡಲಾಗಿದೆ. ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲು ಇವುಗಳನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ನಿಮ್ಮ ನಿಮ್ಮ ವಿಭಾಗಗಳಲ್ಲಿ ನಡೆಯುತ್ತಿರುವ ಸರ ಅಪಹರಣ ಪ್ರಕರಣಗಳ ಬಗ್ಗೆ ತೀವ್ರ ನಿಗಾ ಇಡಿ, ಎಲ್ಲಿ ಹೆಚ್ಚಾಗಿ, ಯಾವ ಸಮಯದಲ್ಲಿ ಸರ ಅಪಹರಣ ನಡೆಯುತ್ತಿದೆ ಎಂಬುದನ್ನು ಅಧ್ಯಯನ ಮಾಡಿದರೆ ಸರ ಅಪಹರಣ ಪ್ರಕರಣಗಳನ್ನು ತಡೆಗಟ್ಟುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ, ನಿಮ್ಮ ವಿಭಾಗಗಳಲ್ಲಿ ಸರ ಅಪಹರಣ ಪ್ರಕರಣಗಳನ್ನು ನಿಯಂತ್ರಿಸಿ ಎಂದು ಡಿಸಿಪಿಗಳಿಗೆ ಕಿವಿಮಾತು ಹೇಳಿದರು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬಹುತೇಕ ಶಾಂತಿಯುತವಾಗಿತ್ತು. ಇದಕ್ಕೆ ಎಲ್ಲ ಪೊಲೀಸರ ಶ್ರಮ ಕಾರಣ. ಅದಕ್ಕಾಗಿ ಎಲ್ಲ ಪೊಲೀಸರಿಗೆ ಹಾಗೂ ನಾಗರಿಕರಿಗೆ ವಂದನೆ ಸಲ್ಲಿಸುತ್ತೇನೆ ಎಂದು ಟಿ.ಸುನೀಲ್ಕುಮಾರ್ ತಿಳಿಸಿ ಶುಭಾಶಯ ಕೋರಿದರು.
ನಗರ ಕಾನೂನು ಹಾಗೂ ಸಂಚಾರ ವಿಭಾಗದ ಇನ್ಸ್ಪೆಕ್ಟರ್ಗಳು, ಎಸಿಪಿಗಳು, ಡಿಸಿಪಿಗಳು ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಪಾಲ್ಗೊಂಡಿದ್ದರು.