ಬೆಂಗಳೂರು, ಜ.1-ನಗರ ಪೊಲೀಸರು ತಮ್ಮ ಕರ್ತವ್ಯದ ಒತ್ತಡದ ನಡುವೆಯೂ ಸಮಯವನ್ನು ಮೀಸಲಿಟ್ಟು ಬೈಕ್, ಚಿನ್ನಾಭರಣ ಕಳೆದುಕೊಂಡಿದ್ದ ದೂರುದಾರರ ಮನೆಗೆ ಮಧ್ಯರಾತ್ರಿ ಅನಿರೀಕ್ಷಿತವಾಗಿ ತೆರಳಿ ಅವರವರ ವಸ್ತುಗಳನ್ನು ಅವರಿಗೆ ನೀಡಿ ಹೊಸ ವರ್ಷದ ಶುಭಾಶಯ ಕೋರಿ ಅಚ್ಚರಿ ಮೂಡಿಸಿದ್ದಾರೆ.
ಪಶ್ಚಿಮವಿಭಾಗ, ಉತ್ತರ ವಿಭಾಗ, ದಕ್ಷಿಣ ವಿಭಾಗ, ಆಗ್ನೇಯ ವಿಭಾಗ ಹಾಗೂ ವೈಟ್‍ಫೀಲ್ಡ್ ಪೊಲೀಸರು ತಮ್ಮ ತಮ್ಮ ವ್ಯಾಪ್ತಿಗಳಲ್ಲಿನ ದೂರುದಾರರಿಗೆ ಚಿನ್ನಾಭರಣಗಳನ್ನು ಹಸ್ತಾಂತರಿಸಿದ್ದಾರೆ.
ಪ್ರಮುಖವಾಗಿ ವೈಟ್‍ಫೀಲ್ಡ್ ಹಾಗೂ ಆಗ್ನೇಯ ವಿಭಾಗದಲ್ಲಿ 10 ಮನೆಗಳಿಗೆ ತೆರಳಿ ಪೊಲೀಸರು ಮಾಲು ತಲುಪಿಸಿದರೆ, ಈಶಾನ್ಯ ವಿಭಾಗದ ಪೊಲೀಸರು 3 ಮನೆಗಳಿಗೆ ತೆರಳಿ ಕಳೆದುಕೊಂಡಿದ್ದ ಮಾಲನ್ನು ನೀಡಿದ್ದಾರೆ.
ಉತ್ತರ ವಿಭಾಗದ ಜೆಸಿನಗರ, ಪೀಣ್ಯಾ, ಯಶವಂತಪುರ ಮಲ್ಲೇಶ್ವರಂ, ಸಂಜಯ್‍ನಗರ ಹಾಗೂ ವೈಟ್‍ಫೀಲ್ಡ್ ವಿಭಾಗದ ಠಾಣಾ ವ್ಯಾಪ್ತಿಗಳಲ್ಲಿ ಚಿನ್ನಾಭರಣ ಕಳೆದುಕೊಂಡವರಿಗೆ ಖುದ್ದು ನಗರ ಪೊಲೀಸ್ ಆಯುಕ್ತರಾದ ಸುನೀಲ್‍ಕುಮಾರ್ ದೂರುದಾರರ ಮನೆಗಳಿಗೆ ತೆರಳಿ ಕಳೆದುಕೊಂಡಂತಹ ವಸ್ತುಗಳನ್ನು ಅವರಿಗೆ ತಲುಪಿಸಿ ಅವರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಮಧ್ಯರಾತ್ರಿ ಇಂತಹದ್ದೊಂದು ಸಾಮಾಜಿಕ ಕಾರ್ಯವನ್ನು ಪೊಲೀಸರು ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾತ್ರಿ 12ರ ನಂತರ ಪೊಲೀಸರು ದೂರುದಾರರ ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಬಾಗಿಲು ತೆರೆಯುತ್ತಿದ್ದಂತೆ ಪೆÇಲೀಸರನ್ನು ಕಂಡ ಮನೆಯವರು ಒಂದು ನಿಮಿಷ ಗಾಬರಿಯಾದರೂ ನಂತರ ಪೊಲೀಸರು ತಾವು ಕಳೆದುಕೊಂಡ ವಸ್ತುಗಳನ್ನು ಹಿಂತಿರುಗಿಸಿ ಹೊಸ ವರ್ಷದ ಶುಭಾಶಯ ಕೋರಿದಾಗ ಮನೆಯವರ ಮೊಗದಲ್ಲಿ ನಗೆ ಮೂಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ವೈಟ್‍ಫೀಲ್ಡ್ ಉಪವಿಭಾಗದ ಕೆ.ಆರ್.ಪುರ ಠಾಣೆ ಪೊಲೀಸರು ಕಳೆದ ವಾರ ಮನೆಗಳ್ಳ ರಮೇಶ್ ಅಲಿಯಾಸ್ ಕೆಜಿಎಫ್ ಎಂಬಾತನನ್ನು ಬಂಧಿಸಿ ಆತನಿಂದ 461 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದರು. ಈ ಆಭರಣಗಳ ವಾರಸುದಾರರನ್ನು ಪತ್ತೆಹಚ್ಚಿದ ಪೊಲೀಸರು ಮಧ್ಯರಾತ್ರಿ ಸರ್‍ಫ್ರೈಸ್ ಎಂಬಂತೆ ಅವರ ಮನೆಗಳಿಗೆ ತೆರಳಿ ಆಭರಣಗಳನ್ನು ತಲುಪಿಸಿದ್ದಾರೆ.