9 ದಿನ ಕಳೆದರೂ ಸಂಪರ್ಕವಿಲ್ಲ; ಮೈತ್ರಿ ಸರ್ಕಾರದ ನಿದ್ದೆಗೆಡಿಸಿದ ರಮೇಶ್​ ಜಾರಕಿಹೊಳಿ ನಡೆ!

ಬೆಳಗಾವಿ: ಸಂಪುಟದಿಂದ ಕೈಬಿಟ್ಟ ಬಳಿಕ ನಿಗೂಢ ನಡೆ ಅನುಸರಿಸುತ್ತಿರುವ ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ ಅವರು 9 ದಿನ ಕಳೆದರೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ರಮೇಶ್​ ಅವರ ಈ ನಿಗೂಢ ನಡೆ ಮೈತ್ರಿ ಸರ್ಕಾರದ ನಿದ್ದೆಗೆಡಿಸುತ್ತಿದೆ ಎನ್ನಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ್​ ಜಾರಕಿಹೊಳಿ ಸೇರಿ ಹಿರಿಯ ಮುಖಂಡರೆಲ್ಲರೂ ಎಷ್ಟೇ ಪ್ರಯತ್ನಿಸಿದರೂ ರಮೇಶ್​ ಸಂಪರ್ಕ ಮಾತ್ರ ಸಾಧ್ಯವಾಗುತ್ತಿಲ್ಲ. ಅಲ್ಲದೆ ರಾಜಧಾನಿ ದೆಹಲಿಯಲ್ಲಿ ರಮೇಶ್​ ಜಾರಕಿಹೊಳಿ ಬೀಡು ಬಿಟ್ಟಿದ್ದಾರೆ. ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ರಮೇಶ್ ಈಗಾಗಲೇ 8 ಜನ ಅತೃಪ್ತ ಶಾಸಕರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಇನ್ನೂ ಐವರು ಶಾಸಕರಿಗೆ ಗಾಳ ಹಾಕಿ, ಏಕಕಾಲಕ್ಕೆ ರಾಜೀನಾಮೆ ಸಲ್ಲಿಸಿ ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಲಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿಯ ಹಿರಿಯ ನಾಯಕರು ಕೂಡ ರಮೇಶ್​ ಜಾರಕಿಹೊಳಿ ಅವರಿಗೆ ಸಾಥ್ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಈ ಸಂಬಂಧ ಸಚಿವ ಸತೀಶ್​ ಜಾರಕಿಹೊಳಿ ಅವರನ್ನು ಕೇಳಿದ್ರೆ, ಯಾರೂ ಪಕ್ಷ ಬಿಡಲ್ಲ. ರಮೇಶ್​ ಜಾರಕಿಹೊಳಿ ಅವರು ವೈಯಕ್ತಿಕ ಕೆಲಸಕ್ಕೆ ತೆರಳಿದ್ದಾರೆ. ಹೀಗಾಗಿ ನನಗೂ ಕೂಡ ರಮೇಶ್​ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ರಮೇಶ್​ ಜಾರಕಿಹೊಳಿ ಅವರ ಸಂಪರ್ಕಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉದ್ಯಮಿ ಲಖನ್​ ಜಾರಕಿಹೊಳಿ ಮೊರೆ ಹೋದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಚಿವ ಸತೀಶ್​ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಅವರಿಗೆ ರಮೇಶ್​ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ.

ರಮೇಶ್​ ಜಾರಕಿಹೊಳಿ ತಂತ್ರವನ್ನು ವಿಫಲಗೊಳಿಸಲು ಮುಂದಾಗಿರುವ ಸಚಿವ ಸತೀಶ್​ ಜಾರಕಿಹೊಳಿ ಅವರು ರಮೇಶ್​ ಅವರ ಜತೆಗಿದ್ದ ಆಪ್ತ ಶಾಸಕರನ್ನು ಖುದ್ದು ಭೇಟಿ ಮಾಡುತ್ತಿದ್ದಾರೆ. ರಮೇಶ್​ ಜಾರಕಿಹೊಳಿ ಜತೆಗೆ ಸೇರಿ ಪಕ್ಷ ಬಿಡದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಹೋದರರು ರೂಪಿಸುತ್ತಿರುವ ತಂತ್ರ-ಪ್ರತಿತಂತ್ರದಲ್ಲಿ ಯಶಸ್ಸು ಯಾರಿಗೆ ದೊರೆಯಲಿದೆ ಎಂಬುವುದು ಸದ್ಯದ ಕುತೂಹಲವಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ