ಮಹದೇವಪುರ, ಡಿ.31-ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದರು.
ಶ್ರೀ ಕನಕ ಯುವಕ ಕುರುಬರ ಸಂಘದ ವತಿಯಿಂದ ಕ್ಷೇತ್ರದ ಖಾಜಿ ಸೊಣ್ಣೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭಗಳಲ್ಲಿ ಹಣ ನೀಡಿ ಮತ ಕೊಂಡುಕೊಳ್ಳಲು ಅಭ್ಯರ್ಥಿಗಳು ಬರುತ್ತಾರೆ. ಹಣ ನೀಡುವ ಅಭ್ಯರ್ಥಿಗೆ ಮತ ಹಾಕದೆ ನ್ಯಾಯಯುತ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.
ಸಚಿವನಾದ ಮೇಲೆ ಇದು ಮೊದಲ ಕಾರ್ಯಕ್ರಮವಾಗಿದ್ದು, ನನ್ನ ಮೇಲೆ ಭರವಸೆ ಇಟ್ಟು ನೀಡಿದ ಸಚಿವ ಸ್ಥಾನಕ್ಕೆ ನ್ಯಾಯ ದೊರಕುವ ರೀತಿ ಕಾರ್ಯ ನಿರ್ವಹಿಸುವೆ ಎಂದು ಹೇಳಿದರು.
ಕನಕದಾಸರು ಒಂದು ಜಾತಿಗೆ ಸೀಮಿತವಾದವರಲ್ಲ, ಸರ್ವಜನಾಂಗದ ನಾಯಕರು ಎಂದು ತಿಳಿಸಿದರು.
ಇದೇ ವೇಳೆ ಮೂರು ಅಡಿ ಎತ್ತರದ ಕನಕ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಇರಿಸಿ ಡೊಳ್ಳು ಕುಣಿತ, ಕೇರಳ ಚಂಡೇ ವಾದ್ಯದೊಂದಿಗೆ ಗ್ರಾಮದ ವಿವಿಧ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಮುಖಂಡರಾದ ಗುಂಜೂರು ರಾಮಕೃಷ್ಣಪ್ಪ, ಅಗರ ಪ್ರಕಾಶ್, ವರ್ತೂರು ಸುರೇಶ್, ಚಂದ್ರು, ನಾಗರಾಜು, ಲೋಕೇಶ್, ರಾಮಾಂಜಿ, ಮುನಿರಾಜು, ನಂಜುಂಡಪ್ಪ, ಚಿಕ್ಕಮುನಿಶಾವiಪ್ಪ ಮತ್ತಿತರರಿದ್ದರು.