ಆಂತರಿಕ ಕಚ್ಚಾಟದಿಂದ ಸಮ್ಮಿಶ್ರ ಸರ್ಕಾರ ಬಿದ್ದರೆ, ಸರ್ಕಾರ ರಚನೆ ಮಾಡದಿರಲು ನಾವೇನು ರಾಜಕೀಯ ಸನ್ಯಾಸಿಗಳಲ್ಲ : ಯಡಿಯೂರಪ್ಪ

ಬೆಂಗಳೂರು, ಡಿ.31-ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ತನ್ನ ಆಂತರಿಕ ಕಚ್ಚಾಟದಿಂದಲೇ ಬಿದ್ದು ಹೋದರೆ ಸರ್ಕಾರ ರಚನೆ ಮಾಡದಿರಲು ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಈ ಮೂಲಕ ಸರ್ಕಾರ ಪತನಗೊಂಡರೆ ನಾವು ಸರ್ಕಾರ ರಚಿಸಲು ಸಿದ್ಧ ಎಂಬುದನ್ನು ಪರೋಕ್ಷವಾಗಿ ರವಾನಿಸಿದ್ದಾರೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ. ಮುಖ್ಯಮಂತ್ರಿಯವರು, ಸಚಿವರು ಸೇರಿದಂತೆ ಯಾರೊಬ್ಬರೂ ಸಮಾಧಾನದಲ್ಲಿಲ್ಲ. ಅವರವರೇ ಹಾದಿಬೀದಿಯಲ್ಲಿ ಕಿತ್ತಾಡಿಕೊಂಡು ಸರ್ಕಾರ ಪತನಗೊಳಿಸಿದರೆ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ನಾವು ಸುಮ್ಮನೆ ಕೂರಲು ನಾವೇನು ರಾಜಕೀಯ ಸನ್ಯಾಸಿಗಳೇ ಎಂದು ಯಡಿಯೂರಪ್ಪ ಮಾಧ್ಯಮದವರನ್ನು ಪ್ರಶ್ನಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು ಈಗಾಗಲೇ ತಮ್ಮ ದಾಳವನ್ನು ಉರುಳಿಸಿದ್ದಾರೆ.ಇದೇ ರೀತಿ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಕೂಡ ತಾವೇನು ಕಡಿಮೆ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.ಈ ಎರಡೂ ಪಕ್ಷಗಳ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ನಿಂತುಹೋಗಿವೆ. ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು.ಸ್ವಲ್ಪ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.

ನಾವು ಯಾವುದೇ ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡಿಲ್ಲ. ಆಪರೇಷನ್ ಕಮಲ ಮಾಡುವ ಅಗತ್ಯವೂ ಇಲ್ಲ. ರಾಜ್ಯದ ಜನತೆ ನಮಗೆ ನೀಡಿರುವ ತೀರ್ಪನ್ನು ಗೌರವಿಸಿ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕುಳಿತು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ. ಆದರೆ ಕಾಂಗ್ರೆಸ್ಸಿಗರು ವಿನಾಕಾರಣ ನಮ್ಮ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಅಸ್ಥಿರಗೊಳಿಸುವ ಯತ್ನಕ್ಕೆ ಬಿಜೆಪಿ ಕೈ ಹಾಕಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಎಸ್‍ವೈ, ನಾನೇನು ರಾಜಕೀಯ ಭವಿಷ್ಯಗಾರನಲ್ಲ. ಮೊದಲು ಜಂಟಿ ಅಧಿವೇಶನ ಯಾವಾಗ ನಡೆಯುತ್ತದೆ ಎಂದು ಮುಖ್ಯಮಂತ್ರಿಯವರು ಹೇಳಲಿ. ನಿಮ್ಮ ಹುಳುಕು ಮುಚ್ಚಿಕೊಳ್ಳಲು ನಮ್ಮ ಮೇಲೆ ಏಕೆ ಆರೋಪ ಮಾಡುತ್ತೀರಿ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಮೇಲೆ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು.ಯಾವುದೇ ಶಾಸಕರಿಗೆ ನಮ್ಮ ಪಕ್ಷಕ್ಕೆ ಬರುವಂತೆ ಆಫರ್ ನೀಡಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ಹಾಗೇನಾದರೂ ಅವರ ಬಳಿ ಸಾಕ್ಷಿಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ 156 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯಸರ್ಕಾರವೇ ಘೋಷಣೆ ಮಾಡಿದೆ. ಎಲ್ಲೆಡೆ ಕುಡಿಯುವ ನೀರು, ಜಾನುವಾರು ಮೇವು ಸಮಸ್ಯೆ, ದುಡಿಯುವ ಕೈಗಳಿಗೆ ಕೆಲಸವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ಮುಖ್ಯಮಂತ್ರಿಯವರು, ಸಚಿವರು ಈ ಬಗ್ಗೆ ಅರಿಯಲು ಪ್ರವಾಸ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಕೂಡ ತಮ್ಮ ಜವಾಬ್ದಾರಿ ಮರೆತಿದ್ದಾರೆ.ಇಂತಹ ಸಮಯದಲ್ಲಿ ಸಮಸ್ಯೆ ಆಲಿಸಬೇಕಾದ ಮುಖ್ಯಮಂತ್ರಿಯವರೇ ಹೊಸ ವರ್ಷಾಚರಣೆಗೆಂದು ಸಿಂಗಾಪುರಕ್ಕೆ ಹೋಗುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಕಡೇ ಪಕ್ಷ ಸಚಿವರಾದರೂ ಪ್ರವಾಸ ಮಾಡಬೇಕಾಗಿತ್ತು, ಅವರೂ ಕೂಡ ವರ್ಷಾಚರಣೆ ಸಂಭ್ರಮದಲ್ಲಿ ತೊಡಗಿರುವುದು ಈ ನಾಡಿನ ದುರಂತ. ಇನ್ನು ಮುಂದಾದರೂ ಅವರಿಗೆ ಸದ್ಬುದ್ಧಿ ಬರಲಿ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸಿಗರು ಬಾಯಿ ಮುಚ್ಚಿಕೊಂಡಿರಲಿ:
ಗಣ್ಯ ವ್ಯಕ್ತಿಗಳ ಓಡಾಟಕ್ಕೆ ಖರೀದಿಸುವ ಅಗಸ್ತ್ಯಾ ವೆಸ್ಟ್‍ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್‍ಗಾಂಧಿ ಫಲಾನುಭವಿಗಳಾಗಿದ್ದಾರೆ ಎಂದು ತನಿಖಾಧಿಕಾರಿಗಳ ಮುಂದೆ ಕ್ರಿಶ್ಚಿಯನ್ ಮೈಕಲ್ ಬಾಯ್ಬಿಟ್ಟಿದ್ದಾನೆ. ಹೀಗಿರುವಾಗ ಪ್ರಧಾನಮಂತ್ರಿಯವರನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಚೋರ್… ಚೋರ್…. ಎಂದು ಕರೆಯುತ್ತಿದ್ದರು. ಆದರೆ ಈಗ ಅವರ ಹೆಸರೇ ತಳಕು ಹಾಕಿಕೊಂಡಿರುವುದರಿಂದ ಇನ್ನು ಮುಂದಾದರೂ ಘನತೆಯಿಂದ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ತನ್ನ ಹುಳುಕು ಮುಚ್ಚಿಕೊಳ್ಳಲು ಆಧಾರ ರಹಿತ ಆರೋಪ ಮಾಡುತ್ತಿದೆ.ಮೋದಿಯವರ ಜನಪ್ರಿಯತೆ ಸಹಿಸದೆ ಸುಳ್ಳು ಆರೋಪ ಮಾಡುವ ಮೂಲಕ ಕಾಂಗ್ರೆಸ್ ನೀತಿಗೆಟ್ಟ ರಾಜಕಾರಣ ಮಾಡಲು ಮುಂದಾಗಿದೆ.ಇದು ಬಹಳ ದಿನ ನಡೆಯುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಿ.ಟಿ.ರವಿ, ಜ್ಯೋತಿಗಣೇಶ್, ಮಾಧುಸ್ವಾಮಿ, ಗೋವಿಂದಕಾರಜೋಳ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ