ಮಂಡ್ಯ,ಡಿ.30- ಬಸ್ ದುರಂತದ ಕರಿನೆರಳಿನಿಂದ ಹೊರ ಬರಲು ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಜನ ಶಾಂತಿ ಹೋಮದ ಮೊರೆ ಹೋಗಿದ್ದಾರೆ.
ಇತ್ತೀಚೆಗೆ ಕನಗನ ಮರಡಿ ಬಸ್ ದುರಂತದಲ್ಲಿ 30 ಮಂದಿ ಸಾವಿಗೀಡಾಗಿದ್ದರು.ಮತ್ತೆ ಇಂತಹ ದುರ್ಘಟನೆ ಮರುಕಳಿಸದಂತೆ ದೇವರ ಮೊರೆ ಹೋಗಿದ್ದಾರೆ.
ದುರಂತ ನಡೆದ ಸ್ಥಳದಲ್ಲಿ ದುಷ್ಟ ಶಕ್ತಿಗಳು ಮನೆಮಾಡಿವೆ. ಅದಕ್ಕಾಗಿ ಪದೇ ಪದೇ ಇಂತಹ ದುರ್ಘಟನೆಗಳು ಈ ಸ್ಥಳದಲ್ಲಿ ನಡೆಯುತ್ತಿವೆ ಎಂಬ ಭೀತಿಗೊಳಗಾಗಿರುವ ಸುತ್ತಮುತ್ತಲಿನ ಗ್ರಾಮಸ್ಥರು ಶಾಂತಿ ಹೋಮ ನಡೆಸುತ್ತಿದ್ದಾರೆ.
ಇದಲ್ಲದೇ ಬಸ್ ದುರಂತ ಘಟನೆ ನಡೆದ ನಂತರ ಸ್ಥಳದ ಸುತ್ತ ಮುತ್ತ ಭೀತಿಯ ವಾತಾವರಣ ಉಂಟಾಗಿದೆ.ರಾತ್ರಿ ವೇಳೆ ಇಲ್ಲಿ ಓಡಾಡಲು ಹೆದರುತ್ತಿದ್ದಾರೆ. ಪ್ರೇತಾತ್ಮಗಳು ಇರಬಹುದು ಎಂಬ ಹಿನ್ನೆಲೆಯಲ್ಲಿ ಸೂರ್ಯ ಮುಳುಗಿದ ನಂತರ ಜನ ಈ ಜಾಗದಲ್ಲಿ ಓಡಾಡುವುದನ್ನೇ ಕಡಿಮೆ ಮಾಡಿದ್ದಾರೆ.
ಇದೆಲ್ಲದರಿಂದ ಹೊರಬರಲು ಕನಗನ ಮರಡಿ ಹಾಗೂ ವದೇ ಸಮುದ್ರ ಗ್ರಾಮಸ್ಥರು ಭೂ ಶಾಂತಿ ಹೋಮ ನಡೆಸುತ್ತಿದ್ದಾರೆ.ಅಪಘಾತ ನಡೆದ ಸ್ಥಳದಲ್ಲಿ ಇನ್ನೂ ಭಯದ ವಾತಾವರಣ ಇರುವ ಹಿನ್ನೆಲೆ ಪೂಜೆ ನಡೆಸಲಾಗುತ್ತಿದೆ.
ಹೋಮದ ನಂತರ ಗ್ರಾಮಸ್ಥರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರಸಾದ ತಯಾರಿಕೆಗೆ ಗ್ರಾಮಸ್ಥರೇ ಮುಂದೆ ನಿಂತಿದ್ದಾರೆ.