ಬೆಂಗಳೂರು, ಡಿ.30- ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ 1.50 ಲಕ್ಷ ಬೆಲೆಯ 3 ಕೆಜಿ 200 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಪೊನ್ನುಸ್ವಾಮಿ ಅಲಿಯಾಸ್ ಬಾಬು (32) ಬಂಧಿತ ಆರೋಪಿ. ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿ, ಕನಕಪುರ ಮುಖ್ಯರಸ್ತೆ, ವಾಜರಹಳ್ಳಿಯ ಮನೆಯೊಂದರಲ್ಲಿ ಆರೋಪಿಯು ಗಾಂಜಾವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಇಟ್ಟುಕೊಂಡಿದ್ದ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿ ವಶದಲ್ಲಿದ್ದ 3 ಕೆಜಿ 200 ಗ್ರಾಂ ತೂಕದ ಗಾಂಜಾ, ಒಂದು ಮೊಬೈಲ್ ಪೊನ್, ಒಂದು ಕಿಟ್‍ಬ್ಯಾಗ್, ನ್ಯೂಸ್ ಪೇಪರ್ ಶೀಟ್‍ಗಳು ಹಾಗೂ ಒಂದು ಬಜಾಜ್ ಡಿಸ್ಕವರಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಚಾಮರಾಜನಗರ ಜಿಲ್ಲೆ, ಪುಷ್ಪಾಪುರದಿಂದ ಗಾಂಜಾವನ್ನು ಖರೀದಿ ಮಾಡಿ ತಂದು ತನ್ನದೇ ವ್ಯವಸ್ಥಿತ ಜಾಲವನ್ನು ಸಂಘಟಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದನೆಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಅಪರ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್, ಉಪ ಪೊಲೀಸ್ ಆಯುಕ್ತ ಗಿರೀಶ್ ಎಸ್. ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಮಹಿಳಾ ಮತ್ತು ಮಾದಕ ದ್ರವ್ಯದಳದ ಸಹಾಯಕ ಪೊಲೀಸ್ ಆಯುಕ್ತ ಬಿ.ಎಸ್.ಮೋಹನ್‍ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.