ಮೇಕೆದಾಟು ಡ್ಯಾಂ ನಿರ್ಮಾಣ, ಮುಳುಗಡೆಯಾಗಲಿರುವ ಪುಣ್ಯಕ್ಷೇತ್ರ ಮುತ್ತತ್ತಿ

ಮಳವಳ್ಳಿ,ಡಿ.30- ತಾಲ್ಲೂಕಿನ ಹಲಗೂರು ಹೋಬಳಿಯ ಪವಿತ್ರ ಪುಣ್ಯಕ್ಷೇತ್ರವಾದ ಮುತ್ತತ್ತಿ ಮೇಕೆದಾಟು ಡ್ಯಾಂ ನಿರ್ಮಾಣದ ಹಿನ್ನೆಲೆಯಲ್ಲಿ ಮುಳುಗಡೆಯಾಗಲಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕದಲ್ಲಿದ್ದಾರೆ.

ಸರ್ಕಾರ ಕುಡಿಯುವ ನೀರಿಗಾಗಿ ಮೇಕೆದಾಟಿನ ಬಳಿ ಡ್ಯಾಂ ನಿರ್ಮಿಸುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ ಎಂಬ ಚಿಂತನೆಯಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದರೂ ಇದರಿಂದ ಪುಣ್ಯಕ್ಷೇತ್ರವಾದ ಮುತ್ತತ್ತಿ ಗ್ರಾಮ ಮುಳುಗಡೆಯಾಗುತ್ತಿದ್ದು, ಇಲ್ಲಿ ವಾಸಿಸುವ 76 ಕುಟುಂಬಗಳ 350ಕ್ಕೂ ಹೆಚ್ಚು ಮಂದಿ ನಮಗೆ ಮುಂದೇನು ಗತಿ ಎಂದು ಚಿಂತೆಗೆ ಬಿದ್ದಿದ್ದಾರೆ.

ಮುತ್ತತ್ತಿ ಗ್ರಾಮದ ಅರ್ಚಕ ಮುತ್ತಯ್ಯ ಹೇಳುವಂತೆ ತೇತ್ರಾಯುಗದಲ್ಲಿ ಶ್ರೀರಾಮ ವನವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಸೀತಾದೇವಿ ಕಾವೇರಿ ನದಿಯಲ್ಲಿ ಸ್ನಾನ ಮಾಡುವಾಗ ಮೂಗಿನಲ್ಲಿದ್ದ ಮೂಗುತಿ ನೀರಿನಲ್ಲಿ ಬಿದ್ದು ಹೋಗುತ್ತದೆ.ಆಗ ಆಂಜನೇಯ ಬಾಲದಿಂದ ಮೂಗುತಿಯನ್ನು ಎತ್ತಿಕೊಡುತ್ತಾನೆ. ಈ ಸ್ಥಳ ಮೂಗುತ್ತಿ ಎತ್ತಿ ಎಂಬ ಕಾರಣಕ್ಕೆ ಮುತ್ತತ್ತಿ ಎಂದ ಸೀತಾದೇವಿ ಹನುಮಂತನಿಗೆ ನೀನು ಮುತ್ತತ್ತಿರಾಯನಾಗಿ ಇಲ್ಲೆ ನೆಲೆಸಿ, ಬಂದ ಭಕ್ತರ ಕಷ್ಟಕಾರ್ಪಣ್ಯಗಳನ್ನು ಬಗೆಹರಿಸು ಎಂದು ಆದೇಶಿಸಿದಳಂತೆ.

ಅದರಂತೆ ಆಂಜನೇಯ ಇಲ್ಲಿ ನೆಲೆಸಿದ ಮೇಲೆ ನಮ್ಮ ಪೂರ್ವಿಕರು ಇಲ್ಲಿನ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿ ಜೀವನ ನಡೆಸುತ್ತಿದ್ದರು.ನಮ್ಮ ತಾತ ಮುತ್ತಾತಂದಿರಂತೆ ನಾವು ಸಹ ಇಲ್ಲಿನ ಪೂಜೆ ಮುಂದುವರೆಸಿಕೊಂಡು ಬಂದಿದ್ದೇವೆ. 1986ರಲ್ಲಿ ದೇವಾಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಯಿತು.
ಡಾ||ರಾಜಕುಮಾರ್ ಸಹ ಈ ದೇವರ ಕೃಪೆಯಿಂದ ಜನಿಸಿದವರು, ರಾಜ್ಯಾದಾದ್ಯಂತ ಹಾಗೂ ಹೊರ ರಾಜ್ಯದಿಂದಲೂ ಅಪಾರ ಭಕ್ತರನ್ನು ಒಳಗೊಂಡಿರುವ ಈ ಪವಿತ್ರ ಪುಣ್ಯಕ್ಷೇತ್ರ ಮುಳುಗಡೆಯಾದರೆ ಇತಿಹಾಸವೇ ಅಳಿಸಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಅರ್ಚಕರಾದ ನಮಗೆ ಬೇರೆ ವೃತ್ತಿ ಗೊತ್ತಿಲ್ಲ, ನಮ್ಮ ವಾಸದ ಮನೆಗಳು, ಜಮೀನನ್ನು ಬಿಟ್ಟು ಹೋಗುವುದು ಎಲ್ಲಿಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ, ಇದರಿಂದ ದಿಗ್ಭ್ರಮೆಗೊಂಡಿದ್ದೇವೆ ಎಂದು ಅವಲತ್ತುಕೊಂಡಿದ್ದಾರೆ.

ಮುತ್ತತ್ತಿ ಒಟ್ಟು ವಿಸ್ತೀರ್ಣ 21ಎಕರೆಯಲ್ಲಿ ನಮ್ಮ ದೇವಸ್ಥಾನ, ಮನೆಗಳು ಜಮೀನುಗಳು, ಅಂಗಡಿ, ಹೋಟೇಲ್, ರೂಮುಗಳು ಒಳಗೊಂಡಿವೆ. ಸರ್ಕಾರ ಕಾವೇರಿ ನದಿ ಹತ್ತಿರದಲ್ಲೇ ದೇವಸ್ಥಾನ ನಿರ್ಮಿಸಿದರೆ ಪೂಜೆ ಪುನಸ್ಕಾರಗಳಿಗೆ ತುಂಬಾ ಅನುಕೂಲವಾಗುತ್ತದೆ.ದೇವಸ್ಥಾನದ ಹತ್ತಿರದಲ್ಲಿ ನಮಗೆ ವಾಸಕ್ಕೆ ಅನುಕೂಲ ಮಾಡಿಕೊಟ್ಟರೆ ನಮ್ಮ ಜೀವನ ಸಾಗುತ್ತದೆ.ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕಾಡುಪ್ರಾಣಿಗಳ ಪಾಡೇನು:
ಮುತ್ತತ್ತಿ ಅರಣ್ಯಪ್ರದೇಶದಲ್ಲಿ ಹೆಚ್ಚು ಕಾಡುಪ್ರಾಣಿಗಳು ವಾಸವಾಗಿದ್ದು, ಮುತ್ತತ್ತಿಗೆ ಹೋಗುವಾಗ ಕೆಸರಕ್ಕಿ ಹಳ್ಳದವರೆಗೂ ನೀರು ತುಂಬುವುದರಿಂದ ಕಾಡುಪ್ರಾಣಿಗಳ ಪಾಡು ಹೇಗೆ ಎಂಬ ಚಿಂತೆ ಕಾಡುತ್ತಿದೆ.

ಈಗಾಗಲೇ ಕಾಡಾನೆಗಳು ನಾಡಿನತ್ತ ಬಂದು ರೈತರು ಬೆಳೆದ ಫಸಲನ್ನು ಹಾಳುಮಾಡಿ ಹೋಗುತ್ತಿವೆ, ಇನ್ನು ಮುಂದಿನ ಗತಿಯೇನು?ಇವೆಲ್ಲವನ್ನೂ ಅವಲೋಕಿಸಿ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕಾಗಿದೆ.

ನೇಚರ್ ಕ್ಯಾಂಪ್ (ಭೀಮೇಶ್ವರಿ) ಮುಳುಗಡೆ:
ಮೇಕೆದಾಟು ಡ್ಯಾಂ ನಿರ್ಮಾಣದಿಂದ ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗ ಮಧ್ಯೆ ಸಿಗುವ ಭೀಮೇಶ್ವರಿಯಲ್ಲಿರುವ ಕಾವೇರಿ ಅಡ್ವೆಂಚರ್ ಅಂಡ್ ನೇಚರ್ ಕ್ಯಾಂಪ್ (ಪ್ರಕೃತಿ ಮತ್ತು ಸಾಹಸ ಶಿಬಿರ) ಸಹ ಮುಳುಗಡೆಯಾಗುತ್ತದೆ.

ಕರ್ನಾಟಕದಲ್ಲಿ ಒಟ್ಟು 22 ಕ್ಯಾಂಪ್‍ಗಳಿವೆ, ಕಬಿನಿ ಬಳಿ ಇರುವ ಕ್ಯಾಂಪ್ ಪ್ರಥಮ ಸ್ಥಾನದಲ್ಲಿದ್ದರೆ, ಬೆಂಗಳೂರಿನಿಂದ 100ಕಿ.ಮೀ ಅಂತರದಲ್ಲಿರುವುದರಿಂದ ಭೀಮೇಶ್ವರಿಯ ಕ್ಯಾಂಪ್ ಕರ್ನಾಟಕದಲ್ಲೇ 2ನೇ ಸ್ಥಾನದಲ್ಲಿದೆ ಎಂದು ಇಲ್ಲಿನ ವ್ಯವಸ್ಥಾಪಕರಾದ ಐ.ರವೀಂದ್ರನಾಥ್ ತಿಳಿಸಿದ್ದಾರೆ.

ನಾನು ಪರಿಸರ ಪ್ರೇಮಿಯೂ ಸಹ ಆಗಿರುವುದರಿಂದ ನಮ್ಮ ಕ್ಯಾಂಪಿನ ಸುತ್ತ ಸಸಿಗಳನ್ನು ನೆಟ್ಟು ಅವನ್ನು ಪೋಷಿಸುತ್ತಿದ್ದೇವೆ. ಇಲ್ಲಿಯ ಪ್ರಕೃತಿ ಮತ್ತು ಸುಂದರ ಮನೋಹರವಾದ ಹಚ್ಚಹಸಿರಿನಿಂದ ಕೂಡಿದ ಕಾಡಿನ ಮಧ್ಯೆ ಇರುವ ಈ ಕ್ಯಾಂಪ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಬೋಟಿಂಗ್ ಟ್ರಕ್ಕಿಂಗ್‍ನಂತಹ ಸೌಕರ್ಯಗಳೊಂದಿಗೆ ಬೆಂಗಳೂರಿಗೆ ಹತ್ತಿರವಿರುವುದರಿಂದ ಹೆಚ್ಚು ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಸವಿದು ಹೋಗುತ್ತಾರೆ.

ಇಂತಹ ಸ್ಥಳ ಮುಳುಗಡೆಯಾಗುತ್ತಿರುವುದು ಪ್ರವಾಸೋದ್ಯಮದ ಮೇಲೆ ಕರಿನೆರಳಾಗಲಿದೆಯೇ ಎಂಬ ಆತಂಕ ಎದುರಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ