ಸಾವಯುವ ಕೃಷಿ ಪದ್ದತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಸಿರು ಸಂತೆ ಆಯೋಜನೆ, ಸಚಿವ ಜಿ.ಟಿ.ದೇವೆಗೌಡ

ಮೈಸೂರು, ಡಿ.30- ಸಾವಯವ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಸಿರು ಸಂತೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ನಗರದ ಬಿರ್ಲೆವಾಡ ರಸ್ತೆಯಲ್ಲಿ ಮಾಗಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಹಸಿರು ಸಂತೆ ಮತ್ತು ಚಿತ್ರಸಂತೆ ಉದ್ಘಾಟಿಸಿ ಮಾತನಾಡಿದರು.

ಈ ಬಾರಿ 80ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಸಾವಯವ ಕೃಷಿ ಉತ್ಪನ್ನಗಳ ಮಾರಾಟ, ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ.ಸಾವಯವ ಉತ್ಪನ್ನಗಳನ್ನು ಬೆಳೆದ ರೈತರು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಹಸಿರು ಸಂತೆಯನ್ನು ಏರ್ಪಡಿಸಿರುವುದಾಗಿ ತಿಳಿಸಿದರು.

ಈ ಸಂತೆಗೆ ಸಾರ್ವಜನಿಕರು, ಕೃಷಿಕರಿಗೆ ಉತ್ತಮ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ಪ್ರತಿ ಭಾನುವಾರವೂ ಹಸಿರು ಸಂತೆಯನ್ನು ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ವಿದ್ಯಾರ್ಥಿಯೊಬ್ಬ ಹೂ ಕುಂಡಗಳನ್ನು ಸಿದ್ಧಪಡಿಸುತ್ತಿರುವುದನ್ನು ಗಮನಿಸಿದ ಜಿ.ಟಿ.ದೇವೇಗೌಡರು ಆತನ ಬಳಿ ಬಂದು ಯುವ ಪೀಳಿಗೆಯವರು ಕುಂಬಾರಿಕೆ ಕಲೆ ಬಗ್ಗೆ ಹೆಚ್ಚು ಗಮನ ಹರಿಸಿರುವುದಕ್ಕೆ ಸಂತೋಷವಾಗುತ್ತದೆ ಎಂದು ಆತನನ್ನು ಪ್ರಶಂಸಿಸಿದರು.

80ಕ್ಕೂ ಹೆಚ್ಚು ವಿವಿಧ ರೀತಿಯ ಕೃಷಿ ಉತ್ಪನ್ನಗಳ ಮಳಿಗೆಗಳನ್ನು ಮಾಗಿ ಉತ್ಸವದಲ್ಲಿ ತೆರೆಯಲಾಗಿತ್ತು. ಸಾವಯವ ಕೃಷಿಕರು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಿದ್ದು, ಹಲವು ಮಹಿಳಾ ಕೃಷಿಕರು ಸಹ ಸಂತೆಯಲ್ಲಿ ಭಾಗವಹಿಸಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಸಾರ್ವಜನಿಕರನ್ನು ತನ್ನತ್ತ ಸೆಳೆಯಿತು.

ಇದೇ ವೇಳೆ ನಾಲ್ಕು ಮಂದಿ ಎಂಜಿನಿಯರ್‍ಗಳು ಮಳಿಗೆಗಳನ್ನು ತೆರೆದು ಚುರುಮುರಿ, ಪಾನಿಪುರಿ ಸೇರಿದಂತೆ ಚಾಟ್ಸ್ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದು, ಇವರು ಕಳೆದ ನಾಲ್ಕು ವರ್ಷಗಳಿಂದಲೂ ಸಹ ಸಂತೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಚಿತ್ರಸಂತೆಯಲ್ಲಿ ಕಾಲಾ ವಿದ್ಯಾರ್ಥಿಗಳು ಭಾಗವಹಿಸಿ ತಾವು ರಚಿಸಿರುವ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದರು.
50ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದಿದ್ದು, ಹಲವಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿ ತಾವು ರಚಿಸಿರುವ ವಿವಿಧ ರೀತಿಯ ಆಕರ್ಷಣೆಯ ಚಿತ್ರಗಳನ್ನು ಪ್ರದರ್ಶಿಸಿದರು.

ಈ ಸಂತೆಯು ಇಂದು ಬೆಳಗ್ಗೆ 9 ರಿಂದ ಸಂಜೆವರೆಗೂ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ರಸ್ತೆಯಲ್ಲಿರುವ ಎಲ್ಲ ಮರಗಳಿಗೂ 60ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಶಾಸಕರ ಗರಂ: ಶಾಸಕ ನಾಗೇಂದ್ರ ಅವರು ಸಂತೆ ವೀಕ್ಷಿಸಲೆಂದು ಉದ್ಘಾಟನೆ ವೇಳೆ ಆಗಮಿಸಿ ಜಿ.ಟಿ.ದೇವೇಗೌಡರ ಬಳಿ ಬಂದು ಈ ಕಾರ್ಯಕ್ರಮಕ್ಕೆ ಎಲ್ಲಿಂದ ಆಗಮಿಸಬೇಕು ಎಂದು ಮೊದಲು ಹೇಳಿ ಎಂದು ಗರಂ ಆದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡರು, ಯಾಕಪ್ಪ, ಏನಾಯಿತು ಎಂದು ಕೇಳಿದ್ದಾರೆ.ಇದಕ್ಕೆ ಉತ್ತರಿಸಿದ ನಾಗೇಂದ್ರ ಅವರು ನಾನು ನಾಲ್ಕು ಕಡೆಯಿಂದ ಸುತ್ತಿಕೊಂಡು ಪೊಲೀಸರ ಜೊತೆ ಜಗಳ ಆಡಿಕೊಂಡು ಬಂದಿದ್ದೇನೆ. ನಾಲ್ಕು ಕಡೆಯೂ ಬ್ಯಾರಿಕೇಡ್ ಹಾಕಿರುವುದರಿಂದ ಸಾರ್ವಜನಿಕರು ಒಳ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಮೊದಲು ಇದನ್ನು ಸರಿಪಡಿಸಿ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ