ಬೆಂಗಳೂರು,ಡಿ.30-ಸಾಹಸಸಿಂಹ,ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್ ಅವರ 9ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಕೆಂಗೇರಿಯ ಅಭಿಮಾನ್ ಸ್ಟೂಡಿಯೋದ ಸಮಾಧಿ ಸ್ಥಳದಲ್ಲಿ ಇಂದು ವಿಷ್ಣು ಅಭಿಮಾನಿಗಳು, ಬೆಂಬಲಿಗರಿಂದ ನೇತ್ರದಾನ, ಆರೋಗ್ಯ ತಪಾಸಣೆ, ಅನ್ನದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ 9 ವರ್ಷ.ಅವರ 9ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಇಂದು ಮುಂಜಾನೆಯಿಂದಲೇ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿದರು.
ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್, ಮಗಳು ಕೀರ್ತಿ ಸೇರಿದಂತೆ ವಿಷ್ಣು ಸಂಬಂಧಿಕರು ಆಗಮಿಸಿ ಪೂಜೆ ನೆರವೇರಿಸಿದರು.
ಅಭಿಮಾನಿಗಳು ಅನ್ನದಾನ, ನೇತ್ರ ತಪಾಸಣೆ, ಆರೋಗ್ಯ ತಪಾಸಣೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಷ್ಣು ಸ್ಮರಣೆ ಮಾಡಿದರು.
ಸಂಗೀತ, ಮಿಮಿಕ್ರಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತು.
ಮುಂದುವರೆದ ಗೊಂದಲ:
ವಿಷ್ಣುವರ್ಧನ್ ನಿಧನರಾಗಿ 9 ವರ್ಷಗಳು ಕಳೆದರೂ ಸ್ಮಾರಕದ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಸಂಬಂಧ ಅವರ ಕುಟುಂಬಸ್ಥರು, ಅಭಿಮಾನಿಗಳು ಆಗಾಗ ಅಸಮಾಧಾನವನ್ನು ಹೊರಹಾಕುತ್ತಲೇ ಬಂದಿದ್ದಾರೆ.ಸಾಕಷ್ಟು ಹೋರಾಟವನ್ನು ನಡೆಸಿದ್ದಾರೆ.ಸದ್ಯ ವಿಷ್ಣು ಕುಟುಂಬಸ್ಥರು ಸ್ಮಾರಕ ಸಮಸ್ಯೆಯನ್ನು ಬಗೆಹರಿಸಲು ಡಿ.30ರವರೆಗೆ ಗಡುವು ನೀಡಿದ್ದರು.
ಇದೀಗ ಗಡುವು ಮುಗಿದಿದ್ದು, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು. ಸಮಾಧಿ ಸ್ಥಳದಲ್ಲಿ ಯಾವುದೇ ಪ್ರತಿಭಟನೆ ಹಾಗೂ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.