
ಬೆಂಗಳೂರು, ಡಿ.30-ಬೆಂಗಳೂರು ಮೆಟ್ರೋ ರೈಲು ನಿಗಮವು 2019ರ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ರೈಲುಗಳ ಸೇವೆಯನ್ನು ವಿಸ್ತರಿಸಿದೆ.
ನಿಗಮವು ನಾಳೆ ರಾತ್ರಿ 11 ಗಂಟೆಯಿಂದ ಜ.1 ರ ಮಧ್ಯರಾತ್ರಿ 1.30ರವರೆಗೂ ಎಲ್ಲಾ ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಾಳೆ ರಾತ್ರಿ 11 ರಿಂದ ಪ್ರತಿ 15 ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಸಂಚರಿಸಲಿವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಜನವರಿ 1ರ ರಾತ್ರಿ 2 ಗಂಟೆಯವರೆಗೂ ನಾಲ್ಕು ದಿಕ್ಕುಗಳಿಗೂ ಕೊನೆಯ ಮೆಟ್ರೋ ರೈಲುಗಳ ಸೇವೆ ಒದಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಟ್ರಿನಿಟಿ ನಿಲ್ದಾಣ, ಮಹಾತ್ಮಗಾಂಧಿ ರಸ್ತೆ, ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಇತರ ಯಾವುದೇ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರಿಗೆ 50 ರೂ.ಗಳ ಕಾಗದದ ಟಿಕೆಟ್ ವಿತರಿಸಲಾಗುವುದು. ಆದರೆ ರೈಲು ಸೇವೆ ವಿಸ್ತರಿಸಿದ ಅವಧಿಯಲ್ಲಿ ಪ್ರಯಾಣಿಕರಿಗೆ ಟೋಕನ್ಗಳನ್ನು ವಿತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ನಾಳೆ ರಾತ್ರಿ 8 ಗಂಟೆಯಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಕಾಗದದ ಟಿಕೆಟ್ಗಳನ್ನು ನೀಡಲಾಗುತ್ತದೆ.ಸ್ಮಾರ್ಟ್ಕಾರ್ಡ್ ಹೊಂದಿರುವ ಪ್ರಯಾಣಿಕರು ಮೊದಲಿನಂತೆಯೇ ವಿಸ್ತರಿಸಲಾದ ಅವಧಿಯಲ್ಲೂ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.
ವಿಸ್ತರಿಸಿದ ಅವಧಿಯಲ್ಲೂ ಟೋಕನ್ ಮತ್ತು ಸ್ಮಾರ್ಟ್ಕಾರ್ಡ್ ಹೊಂದಿರುವ ಪ್ರಯಾಣಿಕರು ಯಾವುದೇ ನಿಲ್ದಾಣಗಳಿಂದ ಟ್ರಿನಿಟಿ ನಿಲ್ದಾಣ, ಮಹಾತ್ಮಗಾಂಧಿ ರಸ್ತೆ, ಕಬ್ಬನ್ಪಾರ್ಕ್ ನಿಲ್ದಾಣಗಳಿಗೆ ಪ್ರಯಾಣಿಸಲು ಸಾಮಾನ್ಯ ದರವೇ ಅನ್ವಯಿಸುತ್ತದೆ ಎಂದು ಪ್ರಕಟಣೆಯಲ್ಲಿ ಮೆಟ್ರೋ ರೈಲು ನಿಗಮ ಸ್ಪಷ್ಟಪಡಿಸಿದೆ.