ಬೆಂಗಳೂರು,ಡಿ.29-ಸಚಿವ ಸ್ಥಾನದಿಂದ ಕೋಕ್ ನೀಡಿದ ಮೇಲೆ ಮುನಿಸಿಕೊಂಡು ಕಳೆದ ಐದು ದಿನಗಳಿಂದ ಯಾರ ಕೈಗೂ ಸಿಗದೆ ಅಜ್ಞಾತ ಸ್ಥಳದಲ್ಲಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅವರ ಕುಟುಂಬ ನವದೆಹಲಿಯ ಪ್ರತಿಷ್ಠಿತ ಹೋಟೆಲ್ವೊಂದರಲ್ಲಿ ಪ್ರತ್ಯಕ್ಷರಾಗಿದ್ದಾರೆ.
ನವದೆಹಲಿಯ ಪಂಚತಾರಾ ಹೋಟೆಲ್ವೊಂದರಲ್ಲಿ ಕುಟುಂಬ ಸಮೇತ ರಮೇಶ್ ಜಾರಕಿಹೊಳಿ ವಾಸ್ತವ್ಯ ಹೂಡಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರಮೇಶ್ ಜಾರಕಿಹೊಳಿ ಪುತ್ರ ಅಮರ್ನಾಥ್, ಅಳಿಯ ಅಂಬಿರಾವ್ ಪಾಟೀಲ್ ಸೇರಿದಂತೆ ಮತ್ತಿತರರು ದೆಹಲಿಯ ಹೋಟೆಲ್ನಲ್ಲಿ ಎರಡು ದಿನಗಳ ಹಿಂದೆಯೇ ವಾಸ್ತವ್ಯ ಹೂಡಿರುವುದು ಬೆಳಕಿಗೆ ಬಂದಿದೆ.
ಕಳೆದ ಐದು ದಿನಗಳ ಹಿಂದೆ ಬೆಂಗಳೂರಿನಿಂದ ಹೊರಟ್ಟಿದ್ದ ರಮೇಶ್ ತಮ್ಮ ತವರು ಜಿಲ್ಲೆ ಬೆಳಗಾವಿಯ ಗೋಕಾಕ್ನಲ್ಲಿ ಕಾಣಿಸಿಕೊಂಡ ನಂತರ ಅವರು ಎಲ್ಲಿಗೆ ಹೋಗಿದ್ದಾರೆ, ಯಾರನ್ನು ಭೇಟಿಯಾಗಿದ್ದರು, ಅವರ ಮುಂದಿನ ರಾಜಕೀಯ ನಡೆಗಳು ಏನು ಎಂಬುದರ ಬಗ್ಗೆ ಕುತೂಹಲ ಮೂಡಿಸಿತ್ತು.
ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಲು ಸಹೋದರ ಹಾಗೂ ಸಚಿವ ಸತೀಶ್ ಜಾರಕಿಹೊಳಿ , ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕರು ನಿರಂತರವಾಗಿ ಪ್ರಯತ್ನ ನಡೆಸಿದ್ದರೂ ಯಾರ ಕೈಗೂ ಸಿಕ್ಕಿರಲಿಲ್ಲ.
ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಗೌಪ್ಯ ಸ್ಥಳಕ್ಕೆ ತೆರಳಿದ್ದ ರಮೇಶ್ ಜಾರಕಿಹೊಳಿ ಎರಡು ದಿನಗಳ ಹಿಂದೆಯೇ ದೆಹಲಿಗೆ ತೆರಳಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಅಲ್ಲಿನ ವಾಲ್ಮೀಕಿ ಸಮುದಾಯದ ಪ್ರಭಾವಿ ಸಚಿವರ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು.
ಒಂದೆಡೆ ರಮೇಶ್ ಜಾರಕಿಹೊಳಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ ಪಡುತ್ತಿದ್ದರೆ, ಬಿಜೆಪಿ ತನ್ನತ್ತ ಸೆಳೆಯಲು ಮುಂದಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎರಡು ದಿನಗಳಿಂದ ದೆಹಲಿಯಲ್ಲಿಯೇ ಇರುವುದು, ರಮೇಶ್ ಜಾರಕಿಹೊಳಿ ಅಲ್ಲಿಯೇ ಬೀಡು ಬಿಟ್ಟಿರುವುದು ಕಾಕತಾಳೀಯ ಎಂಬಂತಾಗಿದೆ.
ರಮೇಶ್ ಜಾರಕಿಹೊಳಿ ಯಾವುದೇ ಸಂದರ್ಭದಲ್ಲಿ ಅಮಿತ್ ಷಾ ಅವರನ್ನು ಭೇಟಿ ಮಾಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಅವರ ಜೊತೆ ಕೆಲವು ಅತೃಪ್ತ ಶಾಸಕರು ಕೂಡ ಸಂಪರ್ಕದಲ್ಲಿರುವುದು ಕಾಂಗ್ರೆಸ್ ಪಕ್ಷದಲ್ಲಿ ನಡುಕು ಹುಟ್ಟುವಂತೆ ಮಾಡಿದೆ.